ಮಂಗಳೂರು: ನಳಿನ್ ಕುಮಾರ್ ಕಟೀಲ್ (ಬಿಜೆಪಿ ರಾಜ್ಯಾಧ್ಯಕ್ಷ) ಹೇಳಿಕೆಗೆ ಉತ್ತರ ಕೊಡಲ್ಲ. ಅವರು ಒಂಥರಾ ಜೋಕರ್ ಇದ್ದ ಹಾಗೆ. ಅವರು ಬಹಳ ಬಾಲಿಶವಾಗಿ ಮತ್ತು ಬೇಜವಾಬ್ದಾರಿಯಿಂದ ಮಾತನಾಡ್ತಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಬಿಜೆಪಿಯಲ್ಲಿ ಅವರೊಬ್ಬ ವಿದೂಷಕ ಇದ್ದಂತೆ. ನಳಿನ್ ಪೆದ್ದುಪೆದ್ದಾಗಿ ಮಾತನಾಡ್ತಾರೆ, ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಅವರು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರನ್ನು ಚುನಾವಣೆಗೂ ಮುನ್ನ ಜೈಲಿಗೆ ಕಳಿಸ್ತೇವೆ ಎನ್ನುವ ನಳಿನ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾನೂನು ಅವರಿಗೆ ಗೊತ್ತಿಲ್ಲ. ಜೈಲಿಗೆ ಕಳಿಸೋದು ಕೋರ್ಟ್ ಗಳು, ಬಿಜೆಪಿಯವರಲ್ಲ ಎಂದು ಹೇಳಿದರು.
ಸಿಎಂ ಅವರಿಗೆ ನಾಯಿ ಮರಿ ಅಂಥ ಹೇಳಿಲ್ಲ, ಧೈರ್ಯ ಇರಬೇಕು ಅಂದಿದ್ದೇನೆ. ನಮಗೆ ರಾಜ್ಯದ ಹಿತ ಮುಖ್ಯ, ಕೇಂದ್ರದ ಜೊತೆ ಧೈರ್ಯವಾಗಿ ಮಾತನಾಡಿ. ಅವರ ಎದುರು ನಾಯಿ ಮರಿ ಥರ ಇರಬಾರದು ಅಂದಿದ್ದೇನೆ. ಇದರಲ್ಲಿ ತಪ್ಪು ಏನು ಇದೆ, ಇದು ಅನ್ ಪಾರ್ಲಿಮೆಂಟ್ರಿನಾ (ಅಸಂವಿಧಾನಿಕ) ? ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.