ಜಿಲ್ಲೆ

ನಳನಳಿಸುತ್ತಿರುವ ಮಾಳಿಗೆ ಕೈತೋಟ

ವಾದಿರಾಜ ವ್ಯಾಸಮುದ್ರ ಕಲಬುರಗಿ
ವಿಶ್ವದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೊನಾ ಬಹಳಷ್ಟು ಕ್ಷೇತ್ರಗಳಿಗೆ ಪೆಟ್ಟು ಕೊಟ್ಟಿದ್ದು ಒಂದೆಡೆಯಾದರೆ, ಈ ಮಹಾಮಾರಿ ತಡೆಗೆ ಹೇರಿದ್ದ ಲಾಕ್ಡೌನ್ ನಾನಾ ಕ್ಷೇತ್ರಗಳಿಗೆ ಸಂಕಟ ತಂದೊಡ್ಡುವುದರ ಜತೆಗೆ ಜನಸಾಮಾನ್ಯರು, ವೃತ್ತಿಪರರ ಜೀವನ ಶೈಲಿಯನ್ನೂ ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಕೆಲವರ ಬದುಕಿಗಂತೂ ಹೊಸ ದಾರಿ ತೋರಿಸಿಕೊಟ್ಟಿದೆ.
ಇನ್ನು ಲಾಕ್ಡೌನ್ ಅವಧಿ ಕೆಲವರಿಗೆ ವರ್ಕ್​ ಫ್ರಮ್ ಹೋಮ್ ಕಾನ್ಸೆಪ್ಟ್ ಕಲಿಸಿಕೊಟ್ಟರೆ, ಮತ್ತೆ ಕೆಲವರಿಗೆ ಭಿನ್ನ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪ್ರೇರಣೆ ನೀಡಿದೆ. ಇಂಥ ಸಂದರ್ಭದಲ್ಲಿ ಹೊಸ ಆಲೋಚನೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಮು ಅವರಸಂಗ ಮನೆ ಮಹಡಿಯಲ್ಲಿ ತಲೆ ಎತ್ತಿದೆ ಹಚ್ಚ ಹಸಿರ ಸೊಬಗಿನ ಕೈತೋಟ.
ಸಂಗಮೇಶ್ವರ ಕಾಲನಿಯ ಸಂಗಮೇಶ್ವರ ಮಹಿಳಾ ಮಂಡಳ ಎದುರಿಗಿರುವ ಎರಡು ಅಂತಸ್ತಿನ ಮನೆ ಮಾಳಿಗೆಯಲ್ಲಿ ತರಕಾರಿ, ಹೂವು, ಹಣ್ಣು ಹೀಗೆ ಟೆರೆಸ್ ಗಾರ್ಡನ್ ಮಾಡುವ ಯೋಚನೆ ಹೊಳೆದಿದ್ದೇ ತಡ ಮುಂದಡಿ ಇಟ್ಟವರು ರಾಮು ಅವರಸಂಗ. ಮನೆಯಲ್ಲಿ ದಿನನಿತ್ಯದ ಸಂಸಾರಕ್ಕೆ ನೆರವಾಗುವಂಥ ಅನೇಕ ಹಳೆಯ ಮತ್ತು ನಿರುಪಯುಕ್ತ ಟೈರ್, ಪೈಪ್, ಚಿಕ್ಕ ಚಿಕ್ಕ ಬಕೆಟ್, ಕುಂಡಗಳನ್ನು ಮಾಳಿಗೆ ಉದ್ಯಾನ ನಿಮರ್ಾಣಕ್ಕೆ ರಾಮು ಬಳಸಿಕೊಂಡಿದ್ದರ ಫಲವಾಗಿ 1500 ಚದರಡಿ ಮಹಡಿಯಲ್ಲಿ ಹಚ್ಚ ಹಸಿರಿನ ಗಾರ್ಡನ್ ಕಂಗೊಳಿಸುತ್ತಿದೆ.
ಇನ್ನು ಈ ಗಾರ್ಡನ್ನಲ್ಲಿ ಉತ್ಪಾದನೆ ಆಗುತ್ತಿರುವ ಬದನೆ, ಟೊಮ್ಯಾಟೊ, ಪೇರಲ, ಹೀರೆಕಾಯಿ, ಮೂಲಂಗಿ, ಗಜ್ಜರಿ, ಮೆಣಸಿನಕಾಯಿ, ಮಾವು, ಕರಬೇವು, ಪುದಿನಾ, ಶುಂಠಿ ಹೀಗೆ ವಿವಿಧ ತರಕಾರಿ ಜತೆಗೆ ಮಲ್ಲಿಗೆ, ಸಂಪಿಗೆ, ದಾಸವಾಳ, ಕರದಾಳಿ, ನಾಗಸಂಪಿಗೆ, ಸೂಜಿಮಲ್ಲಿಗೆ, ಕನಕಾಂಬರಿ ಹೂವುಗಳು, ವೀಳ್ಯದೆಲೆ ಸೇರಿ ಹತ್ತು ಹಲವು ಬಗೆಯ ಅಲಂಕಾರಿಕ ಮತ್ತು ಉಪಯೋಗಕಾರಿ ಗಿಡಗಳು ನೋಡುಗರನ್ನು ಆಕಷರ್ಿಸುತ್ತಿವೆ.
ಈ ಉದ್ಯಾನಕ್ಕೆ 10ರಿಂದ 20 ಸಾವಿರ ರೂಪಾಯಿ ಖಚರ್ು ಮಾಡಿರುವ ಅವರಸಂಗ, ಫಲವತ್ತಾದ ಮಣ್ಣನ್ನು ಹೊರಗಿನಿಂದ ತಂದು ಪೈಪ್, ಟೈರ್, ಬಕೆಟ್ ಮತ್ತು ಕುಂಡಗಳಲ್ಲಿ ಹಾಕಿದ್ದಾರೆ. ಅಗತ್ಯವಿರುವ ಗೊಬ್ಬರವನ್ನು ಮನೆಯಲ್ಲೇ ಸಿದ್ಧಪಡಿಸಿ ಹಾಕಿದ್ದಾರೆ. ವಿವಿಧ ಹಣ್ಣುಗಳ ಸಿಪ್ಪೆಯನ್ನು ಗೊಬ್ಬರ ರೂಪದಲ್ಲಿ ಬಳಸಿದ್ದಾರೆ. ಫುಲ್ ಗ್ರೀನಿಶ್ ವಾತಾವರಣದಲ್ಲಿ ಪಾತರಗಿತ್ತಿಗಳ ಹಾರಾಟ ನೋಡುವುದೇ ಒಂದು ಸುಂದರ ಅನುಭವ.
ಹೋಟೆಲ್, ಬೀದಿ ವ್ಯಾಪಾರ ಸ್ಥಗಿತದಿಂದ ನೀರು ಸೇರಿ ಆಹಾರಕ್ಕಾಗಿ ಪರದಾಡುತ್ತಿದ್ದ ನಾನಾ ಭೇದದ ಪಕ್ಷಿಗಳಿಗೂ ಈ ಉದ್ಯಾನ ಆಹಾರ ಒದಗಿಸುತ್ತಿದ್ದು, ಮನೆಯವರು ಸಹ ಕಾಳು-ಕಡ್ಡಿಗಳ ವ್ಯವಸ್ಥೆ ಮಾಡಿ ಪಕ್ಷಿ ಪ್ರೇಮವನ್ನೂ ಮೆರೆಯುತ್ತಿದ್ದಾರೆ. ಇಲ್ಲೀಗ ನಾನಾ ರೀತಿಯ ಗುಬ್ಬಿಗಳು ಬರುತ್ತಿದ್ದು, ನೋಡುವುದೇ ಒಂದು ಸೌಭಾಗ್ಯ ಎನಿಸಿದೆ. ಮಾಳಿಗೆಯಲ್ಲಿ ಸೃಷ್ಟಿಯಾದ ಕೈತೋಟ ಬಿರು ಬೇಸಿಗೆಯಲ್ಲೂ ತಂಪು ವಾತಾವರಣ ನೀಡಿದ್ದು ಇನ್ನೊಂದು ವಿಶೇಷ.