ಕುಳಗೇರಿ ಕ್ರಾಸ್: ಇಲ್ಲಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಾವು ಕೆಲಸ ಮಾಡಿದ್ದೇವೆ. ನಮಗೆ ನಾಲ್ಕೈದು ವಾರಗಳಿಂದ ಅಧಿಕಾರಿಗಳು ಕೂಲಿ ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಚಿರ್ಲಕೊಪ್ಪ ಗ್ರಾಮದ ಕಾರ್ಮಿಕರು ಸಲಕಿ, ಬುಟ್ಟಿ, ಪಿಕಾಸಿ ಸೇರಿ ವಿವಿಧ ಸಲಕರಣೆಯೊಂದಿಗೆ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ. ಆದರೆ ಕೂಲಿ ವೇತನ ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ನೀಡುತ್ತಿದ್ದಾರೆ. ಕೆಲಸ ಮಾಡದವರ ಖಾತೆಗೆ ಕೂಲಿ ದುಡ್ಡು ಜಮಾ ಮಾಡುತ್ತಾರೆ. ಈ ಕುರಿತು ಇಂಜಿನಿಯರ್ ಅವರನ್ನು ಸಂಪರ್ಕಿಸಿ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಾವು ದುಡಿದ ಕೂಲಿ ಹಣದಲ್ಲಿ ಲಂಚ ಕೇಳುತ್ತಿದ್ದಾರೆ ಎಂದು ಮಹಿಳಾ ಕೂಲಿ ಕಾರ್ಮಿಕರು ಆರೋಪಿಸಿ, ಇಂಜಿನಿಯರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಪಂ ಮುಖ್ಯದ್ವಾರದಲ್ಲಿ ಧರಣಿ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಂಚಾಲಕ ಶಂಕರ ಹೂಗಾರ ಮಾತನಾಡಿ, ನಮ್ಮ ಕೂಲಿ ಹಣ ನೀಡುತ್ತಿಲ್ಲ. ಕಾರ್ಮಿಕರ ಎನ್‌ಎಂಆರ್ ಜಿರೋ ಮಾಡಿ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರ್ ನರೇಗಾ ಯೋಜನೆ ನಿಯಮ ಗಾಳಿಗೆ ತೂರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸಪಟ್ಟರು. ಇದ್ಯಾವುದನ್ನೂ ಲೆಕ್ಕಿಸದ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಹಾಡಿನ ಮೂಲಕ ತೆಗಳಿದರು.
ಗ್ರಾಪಂ ಅಧ್ಯಕ್ಷೆ ರೇಣುಕಾ ಹಿರಗನ್ನವರ, ಬಾದಾಮಿ ಪಿಎಸ್‌ಐ ವಿಠಲ ನಾಯಿಕ, ಎ.ಡಿ. ಸತೀಶ, ತಾಪಂ ಇಂಜಿನಿಯರ್ ಸಿದ್ದು ಹಿರೇಮಠ, ಪಿಡಿಒ ಎಸ್.ಜಿ. ಪರಸನ್ನವರ ಇದ್ದರು.