ಬಾದಾಮಿ ತಾಲೂಕಿನಲ್ಲಿ ಪ್ರಚಾರ ಕೈಗೊಂಡಿದ್ದ ಸಂಯುಕ್ತ ಪಾಟೀಲ ಅವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಕೆಲವಡಿ ಗ್ರಾಮದ ಮಹಿಳೆಯರೊಂದಿಗೆ ಚರ್ಚೆ ಮಾಡಿದರು. 
ಜಿಲ್ಲೆ

ನರೇಗಾ ಮಹಿಳೆಯರೊಂದಿಗೆ ಸಂಯುಕ್ತ ಪಾಟೀಲ ಸಂವಾದ

ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಮನಗೆಲ್ಲುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು, ಬುಧವಾರ ಬಾದಾಮಿ ತಾಲೂಕಿನ ಕೆಲವಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ಕೆಲ ಸಮಯ ಕಳೆದು ಅವರ ಸಮಸ್ಯೆಗಳನ್ನು ಆಲಿಸಿದರು.

ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಕೆಲವಡಿ ಗ್ರಾಮದ ಬಳಿ ಕೆಲಸದಲ್ಲಿ ತೊಡಗಿದ್ದ ಮಹಿಳೆಯರನ್ನು ಕಂಡು ಅವರು ಇದ್ದ ಸ್ಥಳಕ್ಕೆ ತೆರಳಿದರು.  ಅವರ ಸಮಸ್ಯೆಗಳನ್ನು ಆಲಿಸಿದ ಸಂಯುಕ್ತ ಪಾಟೀಲ, ಸರ್ಕಾರದಿಂದ ಏನು ಸವಲತ್ತುಗಳು ಬೇಕಾಗಿದೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕುಟುಂಬಕ್ಕೆ ಆಸರೆಯಾಗಿವೆಯೇ? ಪ್ರತಿ ತಿಂಗಳು ನಿಮ್ಮ ಬ್ಯಾಂಕ್‌ ಖಾತೆಗೆ 2000 ರೂ. ಜಮಾ ಆಗುತ್ತಿದೆಯೇ? ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು.

ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎನ್ನುವ ಉದ್ದೇಶದಿಂದಲೇ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಲಾಗಿದೆ. ‍ಕಾಂಗ್ರೆಸ್‌ ಪಕ್ಷ ಶ್ರಮಕ್ಕೆ ಗೌರವ ಯೋಜನೆಯಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ  ಪ್ರತಿದಿನ 400 ರೂ. ರಾಷ್ಟ್ರೀಯ ಕನಿಷ್ಟ ವೇತನ ನೀಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ  ಬಂದರೆ ರೈತರ ಬೇಡಿಕೆಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಕೃಷಿ ಸಾಲ ಮನ್ನಾ ಮಾಡಲಾಗುವುದು. ಬೆಳೆಹಾನಿಗೆ  ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತಹ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ದೇವಾಲಯಗಳಿಗೆ ಭೇಟಿ:   ಬಾದಾಮಿ ತಾಲೂಕಿನ ವಿವಿಧೆಡೆ ಬುಧವಾರ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ  ಸಂಯುಕ್ತ ಪಾಟೀಲ್ ಅವರು ಬಾದಾಮಿಯ ಪ್ರಸಿದ್ಧ ಶ್ರೀ ಗುಡ್ಡದ ರಂಗನಾಥ ದೇವಾಲಯ, ಕೆಲವಡಿ ಗ್ರಾಮದ ಶ್ರೀ ರಂಗನಾಥ ದೇವಾಲಯ, ತಿಮ್ಮಸಾಘರದ ಗ್ರಾಮದೇವತೆ ದೇವಾಲಯಗಳಗೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ನಂತರ ಮತಯಾಚನೆ  ಮಾಡಿ ಮಾತನಾಡಿದ ಅವರು, ದೇಶದ ಸರ್ವ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ‌ ಅಧಿಕಾರ ಹಿಡಿಯುವುದು ಮುಖ್ಯ.  ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳು ಮಹಿಳೆಯರಿಗೆ ಕುಟುಂಬದ ಭಾರವನ್ನು ಇಳಿಸಿದೆ. ಗ್ಯಾರಂಟಿಗಳು ಪ್ರತಿ ತಿಂಗಳಿಗೆ ಸಾವಿರಾರು ರೂಪಾಯಿ ಬರುತ್ತಿದೆ ಹೇಳಿದರು.

ಶಾಸಕರಾದ ಶ್ರೀ ಭೀಮಸೇನ್ ಚಿಮ್ಮನಕಟ್ಟಿ,  ಸಂಜು ಬರಗುಂಡಿ, ಪ್ರಕಾಶ್‌ ಮೇಟಿ, ರಾಜು ಜವಳಿ, ಬಿ.ಬಿ. ಸೂಳಿಕೇರಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.