ಚಿತ್ರದುರ್ಗ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಲೂಕಿನ 38 ಗ್ರಾಪಂಗಳಲ್ಲಿ ನರೇಗಾ ನಡಿಗೆ ಸುಸ್ಥಿರ ಕಡೆಗೆ ಎಂಬ ಶಿರ್ಷಿಕೆಯಡಿ ಪ್ರತಿ ಮನೆಗೆ ಭೇಟಿ ನೀಡಿ ಕರಪತ್ರದ ಮೂಲಕ ಯೋಜನೆಯ ಅರಿವು ಮೂಡಿಸಲಾಗುತ್ತಿದೆ.
ಗ್ರಾಮದ ಗುಂಪುಗಳೊಂದಿಗೆ ಹಾಗೂ ರೈತ ಸಮೂಹಕ್ಕೆ ನರೇಗಾ ಹಕ್ಕು, ಉದ್ಯೋಗ ಬೇಡಿಕೆ, ಜಲ ಸಂರಕ್ಷಣಾ ಕಾಮಗಾರಿಗಳನ್ನು ಸೃಜಿಸುವ ಮಾಹಿತಿಯನ್ನು ಸಂವಹನ ಕಾರ್ಯವನ್ನು ಕಳೆದ ಒಂದು ತಿಂಗಳಿಂದ ಮಾಡಲಾಗುತ್ತಿದೆ.
2024-25ರ ಕ್ರಿಯಾ ಯೋಜನಾ ತಯಾರಿ ಮತ್ತು ಕಾರ್ಮಿಕ ಆಯವ್ಯಯ ಸಿದ್ದಪಡಿಸುವ ಪ್ರಕ್ರಿಯೆಗಳು ಚಾಲನೆಯಲ್ಲಿವೆ.
ಪ್ರತಿ ಗ್ರಾಮೀಣ ಕುಟುಂಬಕ್ಕೆ ನೂರು ದಿನದ ಉದ್ಯೋಗ ದೊರೆಯಲಿದ್ದು, ತಮ್ಮ ವೈಯಕ್ತಿಕ ಆಸ್ತಿ ಸೃಜಿಸುವ, ಸ್ವಚ್ಛತೆಗೆ ಬಚ್ಚಲು ಗುಂಡಿ, ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
2 ವರ್ಷಗಳಲ್ಲಿ ನರೇಗಾದಡಿ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಲ್ಲಿ ತಮ್ಮ ಜಮೀನಿನಲ್ಲಿ ಅರ್ಧದಿಂದ 1 ಎಕರೆ ಮೇವು ಅಭಿವೃದ್ಧಿಗೆ ಅವಕಾಶ, ಕೃಷಿ ಹೊಂಡಗಳ ನಿರ್ಮಾಣ, ಬದುವಿನ ಸುತ್ತ ಕೃಷಿ ಅರಣ್ಯ, ನೀರಾವರಿ ಅಥವಾ ಮಳೆಯಾಶ್ರಿತ ತೋಟಗಾರಿಕೆ ಮತ್ತು ರೇಷ್ಮ್ಮೆ ಬೆಳೆಯುವ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.
ಗ್ರಾಮಗಳಲ್ಲಿ ಸಮುದಾಯ ಕಾಮಗಾರಿಗಳಾದ ಸಮಗ್ರ ಶಾಲಾ ಅಭಿವೃದ್ಧಿ, ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಂಜೀವಿನಿ ಶೆಡ್ ನಿರ್ಮಾಣ, ಇತರ ಸ್ಥಿರಾಸ್ತಿ ಸೃಜಿಸುವ ಮತ್ತು ಗ್ರಾಮದ ರಸ್ತೆ ಬದಿ ನಡು ತೋಪು, ಗೋಮಾಳ ಅಭಿವೃದ್ಧಿ, ಕೆರೆ ಗೋಕಟ್ಟೆಗಳ ಸೇರಿ ಜಲಮೂಲಗಳ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸಮಗ್ರ ಗ್ರಾಮ ಅಭಿವೃದ್ಧಿಗೆ ಕಾರಣರಾಗಿ ನಿತ್ಯ 316 ರೂ. ಕೂಲಿ ಹಣ ಪಡೆಯಬಹುದಾಗಿದೆ.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಉಪ ಕಾರ್ಯದರ್ಶಿ ಕೆ.ತಿಮ್ಮಯ್ಯ, ತಾಪಂ ಇಒ ಎಚ್.ಹನುಮತಪ್ಪ, ಎಡಿಪಿಸಿ ಮೋಹನ್, ಡಿಐಇಸಿ ರವೀಂದ್ರ, ನರೇಗಾ ಸಹಾಯಕ ನಿರ್ದೇಶಕ ಮರಿಸ್ವಾಮಿ, ಸತ್ಯನಾರಾಯಣ, ರಮೇಶ್, ಟಿ.ಎ.ಕಿಶೋರ್ ಇತರರಿದ್ದರು.