ಚಿಕ್ಕಬಳ್ಳಾಪುರ : ತಾಲೂಕಿನ ವಿವಿಧೆಡೆ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜೀಯಾ ತರನ್ನುಮ್ ಶನಿವಾರ ಭೇಟಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ದೊಡ್ಡಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡಗಾನಹಳ್ಳಿ ಸರ್ಕಾರಿ ಶಾಲೆ, ದೇವಿಶೆಟ್ಟಹಳ್ಳಿ, ಡಿ.ಹೊಸೂರು ಮತ್ತು ದೊಡ್ಡಮರಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಬದುಗಳು, ಶೌಚಗೃಹ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸವಲತ್ತುಗಳ ಕುರಿತು ಅರಿವು ಮೂಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಿಯಾ ಯೋಜನೆ ರೂಪಿಸುವುದು, ಅನುದಾನದ ಖರ್ಚು ಮತ್ತು ಪ್ರಗತಿ ಸಾಧನೆಯ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆದುಕೊಳ್ಳುತ್ತಿದ್ದು ಸಮಸ್ಯೆಗಳನ್ನೂ ತಿಳಿದುಕೊಂಡು ತ್ವರಿತವಾಗಿ ಬಗೆಹರಿಸಲಾಗುತ್ತಿದೆ ಎಂದು ಸಿಇಒ ತಿಳಿಸಿದರು.
ಜಿಪಂ ಯೋಜನಾಧಿಕಾರಿ ಕೆ.ಗಿರಿಜಾ ಶಂಕರ್, ತಾಪಂ ಇಒ ಹರ್ಷವರ್ಧನ್, ಪಿಡಿಒ ರವಿಕುಮಾರ್ ಮತ್ತಿತರರು ಇದ್ದರು.