ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಅವರು ಬಿಎ, ಬಿಇಡಿ, ಎಂಎ, ಸೇರಿ ಎರಡೆರಡು ಪದವಿ ಪಡೆದವರು. ಒಬ್ಬರು ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಮತ್ತೊಬ್ಬರು ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನೊಬ್ಬರು ಪ್ರೖೆವೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಲಾಕ್ಡೌನ್ ಅವರ ಬದುಕಿನ ಉದ್ಯೋಗದ ಚಿತ್ರಣವನ್ನೇ ಬದಲಿಸಿದೆ.
ಕರೊನಾದಂತಹ ಸಂಕಷ್ಟ ಕಾಲದಿಂದ ನಗರ ಬಿಟ್ಟು ಸ್ವ ಗ್ರಾಮಕ್ಕೆ ಹಿಂದಿರುಗಿದ ಅವರು, ನರೇಗಾ ಕೂಲಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ ಬಿಎ ಹಾಗೂ ಬಿಎಡ್ ಪದವೀಧರೆ ಲಾಲವ್ವ ಲಮಾಣಿ, ಎಂಎ ಪದವೀಧರ ಹಾಗೂ ಅತಿಥಿ ಉಪನ್ಯಾಸಕ ಫಕೀರೇಶ ಕತ್ತೆಬೆನ್ನೂರ, ಬಿಎ ಪದವೀಧರ ಹನುಮಂತಪ್ಪ ಬನ್ನಿಮಟ್ಟಿ ಸೇರಿ ಮೂವರು ಕಳೆದ ಕೆಲವು ದಿನಗಳಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ.
ಲಾಕ್ಡೌನ್ ಬಳಿಕ ಹಲವರು ನಗರ ಬಿಟ್ಟು ಊರು ಸೇರಿದ್ದಾರೆ. ಅವರಲ್ಲಿ ಅನೇಕರು ಸ್ಥಳೀಯವಾಗಿಯೇ ತರಕಾರಿ ಮಾರಾಟ, ಹಣ್ಣು ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಆದರೆ, ಈ ವಿದ್ಯಾವಂತರು ಯಾವುದೇ ಮುಜುಗರ ಇಲ್ಲದೆ ಉದ್ಯೋಗ ಖಾತ್ರಿಯಲ್ಲಿ ಕೂಲಿಕಾರರಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ವಾಭಿಮಾನದ ಬದುಕಿಗೆ ಮುಂದಾಗಿದ್ದಾರೆ.
ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೂರು ತಿಂಗಳ ಹಿಂದಷ್ಟೇ ಲಾಲವ್ವ ಲಮಾಣಿ ಬಿಇಡಿ ಪದವಿ ಪಡೆದಿದ್ದಾಳೆ. ಶೇ. 76ರಷ್ಟು ಫಲಿತಾಂಶದೊಂದಿಗೆ ಪಾಸಾಗಿರುವ ಲಾಲವ್ವ ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದಳು. ಆದರೆ, ಅಷ್ಟರೊಳಗೇ ಕರೊನಾ ವಕ್ಕರಿಸಿ ಲಾಕ್ಡೌನ್ ಘೊಷಣೆಯಾದ್ದರಿಂದ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ. ವಯಸ್ಸಾದ ಅಪ್ಪ, ಅಮ್ಮ ಊರಲ್ಲಿ ಕೆಲಸ ಸಿಗದೇ ಕೂತಿದ್ದರು. ಆ ವೇಳೆಗೆ ಊರಲ್ಲಿ ಉದ್ಯೋಗ ಖಾತ್ರಿ ಯೋಜನೆ ಶುರುವಾಗಿತ್ತು. ಕುಟುಂಬದ ಜಾಬ್ ಕಾರ್ಡ್ ಇರುವುದನ್ನು ಗಮನಿಸಿದ ಲಾಲವ್ವ ಮರುದಿನವೇ ಕೂಲಿಗೆ ಹೋಗಲು ಶುರುಮಾಡಿದಳು.
ಜಲಾಮೃತ ಜಲಾನಯನ ಕಾಮಗಾರಿಯಲ್ಲಿ ಲಾಲವ್ವ ಲಮಾಣಿ ಕೂಲಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ‘ಮನೆಯಲ್ಲಿ ಕಷ್ಟ ಇದೆ, ಕರೊನಾ ಸಂಕಷ್ಟದಿಂದ ಬೇರೆಡೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಈ ಕಾರಣದಿಂದ ಉದ್ಯೋಗ ಖಾತ್ರಿ ಕೂಲಿಕಾರಳಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ಕುಟುಂಬದ ಜೀವನ ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮೂರಿನಲ್ಲೇ ಸಿಕ್ಕಿರುವ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ’ ಎಂದು ಲಾಲವ್ವ ಅಭಿಮಾನದಿಂದ ‘ವಿಜಯವಾಣಿ’ ಎದುರು ಅಭಿಪ್ರಾಯ ಹಂಚಿಕೊಂಡರು.
ಖಾಸಗಿ ಕಂಪನಿ ನೌಕರನೀಗ ‘ಮೇಟಿ’: ಹನುಮಂತಪ್ಪ ಮಾದರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಲಾಕ್ಡೌನ್ನಿಂದ ಖಾಸಗಿ ಕಂಪನಿ ತಾತ್ಕಾಲಿಕವಾಗಿ ಬಂದ್ ಇರುವ ಕಾರಣ ತಿಂಗಳಿಂದ ನರೇಗಾದಡಿ ಮೇಟಿಯಾಗಿ (40 ಜನರ ಗುಂಪಿನ ಮುಖ್ಯಸ್ಥ) ಕಾರ್ಯನಿರ್ವಹಿಸುತ್ತಿದ್ದಾನೆ. ಸ್ವಲ್ವ ಪ್ರಮಾಣದಲ್ಲಿ ಅಂಗವಿಕಲನಾಗಿರುವ ಕಾರಣ ಮೇಟಿ ಕೆಲಸ ಕೊಟ್ಟಿದ್ದಾರೆ. ಕರೊನಾದಂತಹ ಸಮಯದಲ್ಲಿ ಸರ್ಕಾರ ನರೇಗಾದಡಿ ದುಡಿಮೆ ಕೊಟ್ಟಿದ್ದು, ಬಹಳ ಅನುಕೂಲ ಆಗಿದೆ ಎಂದು ಹನುಮಂತಪ್ಪ ಅಭಿಪ್ರಾಯ ಹಂಚಿಕೊಂಡರು.
ಬದು ನಿರ್ವಣಕ್ಕೆ ಮುಂದಾದ ಅತಿಥಿ ಉಪನ್ಯಾಸಕ: ಫಕೀರೇಶ ಕತ್ತೆಬೆನ್ನೂರ ನಗರದ ಬಿಎಜೆಎಸ್ಎಸ್ ಕಾಲೇಜ್ ಹಾಗೂ ತಾಲೂಕಿನ ಮೇಡ್ಲೇರಿ ಬಸವೇಶ್ವರ ಪಿಯು ಕಾಲೇಜ್ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲಾಕ್ಡೌನ್ನಿಂದ ಕಾಲೇಜ್ ಬಂದ್ ಆಗಿವೆ. ಸರ್ಕಾರದಿಂದ ಯಾವುದೇ ಆರ್ಥಿಕ ಸೌಲಭ್ಯವೂ ದೊರೆಯಲಿಲ್ಲ. ಇದರಿಂದ ಧೃತಿಗೆಡದ ಫಕೀರೇಶ, ನರೇಗಾದಡಿ ಕೂಲಿ ಮಾಡಲು ಮುಂದಾಗಿದ್ದಾರೆ. ಗ್ರಾಮದ ಜಮೀನುಗಳಲ್ಲಿ ಗುದ್ದಲಿ, ಶಲಿಕೆ ಹಿಡಿದು ಬದು ನಿರ್ಮಾಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವಿಶ್ವವೇ ಕರೊನಾ ವಿರುದ್ಧ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಪದವಿ ಮುಗಿಸಿರುವ ನಮಗೆ ಈ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿರುವುದು ಸಂತಸ ಎನಿಸುತ್ತಿದೆ. ಸ್ವಾವಲಂಬಿ ಬದುಕು ಸಾಗಿಸಲು ಇದರಿಂದ ಅನುಕೂಲವಾಗಿದೆ. | ಲಾಲವ್ವ, ಫಕೀರೇಶ, ಹನುಮಂತಪ್ಪ