ಚಾಮರಾಜನಗರ : ಬಾಕಿ ಉಳಿದಿರುವ ನರೇಗಾ ಕೂಲಿ ಹಣ ನೀಡುವಂತೆ ಆಗ್ರಹಿಸಿ ಕುಂತೂರು ಮಹಿಳಾ ಕೂಲಿ ಕಾರ್ಮಿಕರು ಗುರುವಾರ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶವ್ಯಕ್ತಪಡಿಸಿದರು.
ಪುಟ್ಟಮ್ಮ ಮಾತನಾಡಿ, ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಐದು ವಾರದ ಹಣವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಮಹಿಳೆಯರ ಶ್ರಮಕ್ಕೆ ಅಧಿಕಾರಿಗಳು ಬೆಲೆಯನ್ನೇ ಕೊಡುತ್ತಿಲ್ಲ. ಕೂಲಿ ನೀಡದಿದ್ದರೆ ಜೀವನ ಹೇಗೆ ನಡೆಯುತ್ತದೆ ಎಂದು ಅಸಮಾಧಾನವ್ಯಕ್ತಪಡಿಸಿದರು. ಈಗಲೂ ಬಾಕಿ ಹಣ ನೀಡದಿದ್ದರೆ ಪ್ರತಿಭಟನೆ ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಶ್ರೀನಿವಾಸ್ ಹಾಗೂ ಕುಂತೂರು ಗ್ರಾಪಂ ಅಧ್ಯಕ್ಷೆ ಗಂಗಮ್ಮಣಿ, ತಾಂತ್ರಿಕ ದೋಷದಿಂದಾಗಿ ತೊಂದರೆಯಾಗಿತ್ತು. ಮೂರು ದಿನದಲ್ಲಿ ಹಣ ನೀಡಲಾಗುತ್ತದೆ. ನಿಮ್ಮ ಖಾತೆಗೆ ಹಣ ಹಾಕುವುದಾಗಿ ಭರವಸೆ ನೀಡಿದರು.
ಬಳಿಕ ಮಹಿಳೆಯರು ಪ್ರತಿಭಟನೆಯನ್ನು ಕೈಬಿಟ್ಟರು.
ಕುಂತೂರು ಗ್ರಾಮದ ಶಿವಮ್ಮ, ರೇಣುಕಮ್ಮ, ಮಹದೇವಮ್ಮ, ಕಮಲಮ್ಮ, ಜಯಮ್ಮ, ಚಿನ್ನತಾಯಮ್ಮ, ನಿಂಗತಾಜಿ, ಲತಾ, ನಂಜಮ್ಮ, ಸರೋಜಮ್ಮ, ಮಲ್ಲಾಜಮ್ಮ ಇತರರು ಇದ್ದರು.