ಮದ್ದೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಕೂಲಿಕಾರ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ನರೇಗಾ ಕೂಲಿಕಾರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ. ಪುಟ್ಟಮಾದು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 1000 ಕೋಟಿ ರೂ. ನರೇಗಾ ಕೂಲಿ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದೆವು. ಕೇಂದ್ರ ಸರ್ಕಾರದೊಡನೆ ಮಾತುಕತೆ ನಡೆಸಿ ಶೀಘ್ರವಾಗಿ ಕೂಲಿ ಹಣ ಬಿಡುಗಡೆಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ರೋಜ್ಗಾರ್ ದಿವಸ ಆಚರಿಸಬೇಕು. ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕನಿಷ್ಠ ಕೂಲಿ 424 ರೂ. ಜಾರಿಗೆ ಆಗ್ರಹಿಸಿ ಆ.26ರಂದು ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ವೃದ್ಧರು, ಅಂಗವಿಕಲರು, ವಿಧವೆಯರು, ಮಂಗಳಮುಖಿಯರು, ನಿರ್ಗತಿಕರು ಸೇರಿದಂತೆ ಇತರರಿಗೆ ಸಕಾಲಕ್ಕೆ ಮಾಸಾಶನವನ್ನು ನೀಡಬೇಕೆಂದು ಆಗ್ರಹಿಸಿ ಆ. 27ರಂದು ಬೆಸಗರಹಳ್ಳಿ ಗ್ರಾಮದಲ್ಲಿ ಹೋಬಳಿ ಮಟ್ಟದ ಮಾಸಾಶನ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ಜಂಟಿ ಕಾರ್ಯದರ್ಶಿ ಕೆ. ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ, ತಾಲೂಕು ಕಾರ್ಯದರ್ಶಿ ತೈಲೂರು ಟಿ.ಪಿ.ಅರುಣ್ ಕುಮಾರ್, ರಾಜ್ಯ ಸಮಿತಿ ಸದಸ್ಯರಾದ ಕರಡಕೆರೆ ಟಿ.ಸಿ ವಸಂತ, ಬಿ.ಎ.ಮಧುಕುಮಾರ ಇತರರಿದ್ದರು.