ಹನೂರು: ನರೇಗಾ ಯೋಜನೆಯಡಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಸೋಮವಾರ ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಮುಭಾಗ ಮಹಿಳೆಯರು ದಿಢೀರ್ ಪ್ರತಿಭಟನೆ ನಡೆಸಿದರು.
ಪೊನ್ನಾಚಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಗೇರಟ್ಟಿ, ಕಕ್ಕೆಹೊಲ, ಮೇಗನೂರು ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಗ್ರಾಪಂ ಮುಂಭಾಗ ಜಾಬ್ ಕಾರ್ಡ್ ಹಿಡಿದು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಮಾತನಾಡಿ, ಜನರಿಗೆ 100 ದಿನಗಳ ಕಾಲ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕೆರೆ, ಕಾಲುವೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ಜನರು ಉದ್ಯೋಗ ಚೀಟಿ ಹೊಂದಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಜನರಿಗೆ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ತಾಪಂ ಇಒ ಉಮೇಶ್, ಜನರ ಸಮಸ್ಯೆ ಆಲಿಸಿದರು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ವಹಿಸಿ ಇನ್ನೆರಡು ದಿನದೊಳಗೆ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ನೀಡುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ನಿರ್ಮಾಗೊಂಡಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟನೆಗೊಳಿಸುವಂತೆ ಹಾಗೂ ಚರಂಡಿ ತ್ಯಾಜ್ಯ ತೆರೆವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇಒ ಅವರು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.