ಧಾರವಾಡ: ಬ್ಯಾಂಕ್ ಖಾತೆಯ ವಿವರ, ಒಟಿಪಿ ಪಡೆದು ಆನ್ಲೈನ್ ಮೂಲಕ ಮೋಸ ಮಾಡುವುದು ಇತ್ತೀಚೆಗೆ ಹೆಚ್ಚುತ್ತಿದೆ. ಚಾಲಾಕಿ ಚೋರರು ಸರ್ಕಾರಿ ಇಲಾಖೆಯ ಖಾತೆಯನ್ನೂ ಬಿಟ್ಟಿಲ್ಲ. ನರೇಗಾ ಆಡಳಿತ ವೆಚ್ಚದ ಖಾತೆಗೇ ಕನ್ನ ಹಾಕಿರುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
2019ರ ಡಿ. 22ರಂದು ಜಿಲ್ಲೆಯ ಪ್ರಭುನಗರ ಹೊನ್ನಾಪುರ ಹಾಗೂ ಗೌಡಗೇರಿ ಗ್ರಾ.ಪಂ.ಗಳ ಹೆಸರಿನಲ್ಲಿ ಡಾಂಗಲ್ಗಳನ್ನು ದುರ್ಬಳಕೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಂದು ಭಾನುವಾರವಾಗಿದ್ದು, ಪಿಡಿಒಗಳ ಗಮನಕ್ಕೆ ಬಾರದೆ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. 15,750 ಮತ್ತು 6,000 ರೂ. ವರ್ಗಾವಣೆಯಾಗಿದೆ. ಎಂಡ್2ಎಂಡ್ ಸಾಫ್ಟ್ವೇರ್ನಲ್ಲಿ ನರೇಗಾ ಆಡಳಿತ ವೆಚ್ಚದ ಖಾತೆ ಹ್ಯಾಕ್ ಆಗಿರುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ಇದೇರೀತಿ ಇನ್ನೂ ಹಲವು ಗ್ರಾ.ಪಂ.ಗಳ ನರೇಗಾ ಆಡಳಿತ ವೆಚ್ಚದ ಖಾತೆಗೆ ಕನ್ನ ಹಾಕಿ ಭಾರಿ ಮೊತ್ತದ ಹಣ ಅಕ್ರಮವಾಗಿ ವರ್ಗವಾಗಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಪ್ರಭುನಗರ ಹೊನ್ನಾಪುರದ ಮಹಿಳಾ ಪಿಡಿಒ ಡಿ. 22ರಂದು ಭಾನುವಾರವಾಗಿದ್ದರಿಂದ ಪಂಚಾಯಿತಿಗೆ ಹೋಗಿರಲಿಲ್ಲ. ಅಂದು ಡಿಎಸ್ಸಿ ಡಾಂಗಲ್ನಿಂದ 15,750 ರೂ. ಅನಧಿಕೃತವಾಗಿ ಸಂದಾಯವಾಗಿದೆ. ಜ. 21ರಂದು ಜಿ.ಪಂ. ಡಿಎಂಐಎಸ್ ಹಾಗೂ ತಾ.ಪಂ. ಟಿಎಂಐಎಸ್ ಸಿಬ್ಬಂದಿ ಕರೆದು ವಿಚಾರಣೆ ಮಾಡಿದಾಗಲೇ ಅವರ ಗಮನಕ್ಕೆ ಬಂದಿದೆ. ಅವರ ಆಡಳಿತ ವೆಚ್ಚದ ಖಾತೆ ಸಂಖ್ಯೆ 64159636255 ಯಿಂದ ಅಕ್ರಮವಾಗಿ ಹಣ ಸಂದಾಯ ಮಾಡಿಕೊಳ್ಳಲಾಗಿದೆ. ಈ ಕುರಿತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಮತಿ ಪಡೆದು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯ ಗೌಡಗೇರಿ ಪಂಚಾಯಿತಿಯಲ್ಲೂ ಇದೇರೀತಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ.
ಎಸ್ಬಿಐ ಖಾತೆಗೆ ವರ್ಗ:
ನರೇಗಾ ಆಡಳಿತ ವೆಚ್ಚದ ಖಾತೆ ಹ್ಯಾಕ್ ಮಾಡಿರುವ ಖದೀಮರು, ಚಿತ್ರದುರ್ಗದ ಶ್ರೀ ಸಾಯಿ ಕಂಪ್ಯೂಟರ್ಸ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಎಸ್ಬಿಐ ಖಾತೆ ಸಂಖ್ಯೆ 36984161553ಕ್ಕೆ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಜಿ.ಪಂ., ತಾ.ಪಂ. ಅಧಿಕಾರಿಗಳು ವಿಚಾರಿಸಿದಾಗ ಹಣ ಸಂದಾಯವಾಗಿದ್ದನ್ನು ಖಾತೆ ಮಾಲೀಕ ಒಪ್ಪಿಕೊಂಡಿದ್ದಾರೆ. ಆದರೆ ಹಣದ ಮೂಲದ ಬಗ್ಗೆ ಮಾಹಿತಿ ಇಲ್ಲ ಎಂದಿರುವುದಾಗಿ ತಿಳಿದುಬಂದಿದೆ.
ಧಾರವಾಡ ಜಿಲ್ಲೆಯ 2 ಗ್ರಾ.ಪಂ.ಗಳ ಎಂಡ್2ಎಂಡ್ ಸಾಫ್ಟ್ವೇರ್ನಲ್ಲಿ ನರೇಗಾ ಆಡಳಿತ ವೆಚ್ಚದ ಖಾತೆಯಿಂದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಗೌಡಗೇರಿ ಮತ್ತು ಪ್ರಭುನಗರ ಹೊನ್ನಾಪುರ ಪಿಡಿಒಗಳು ಗಮನಕ್ಕೆ ತಂದಿದ್ದಾರೆ. ಸೈಬರ್ ಠಾಣೆಯಲ್ಲಿ ದೂರು ದಾಖಲಿಸುವಂತೆ ನಿರ್ದೇಶಿಸಲಾಗಿದೆ. ಸೈಬರ್ ಪೊಲೀಸರು ತನಿಖೆ ನಡೆಸಿದ ನಂತರವೇ ಸತ್ಯಾಂಶ ಬೆಳಕಿಗೆ ಬರಲಿದೆ.| ಡಾ. ಬಿ.ಸಿ. ಸತೀಶ, ಧಾರವಾಡ ಜಿ.ಪಂ. ಸಿಇಒ
ಎಂಡ್2ಎಂಡ್ ಸಾಫ್ಟ್ವೇರ್ ಲಾಗಿನ್, ಬಳಕೆಯ ಬಗ್ಗೆ ಮಾಹಿತಿಯೇ ಇಲ್ಲ. ಆದಾಗ್ಯೂ ಗಮನಕ್ಕೆ ಬಾರದೆ ನರೇಗಾ ಆಡಳಿತ ವೆಚ್ಚದ ಖಾತೆಯಿಂದ ಹಣ ಸಂದಾಯವಾಗಿ ನನ್ನ ಮೇಲೆ ಅಪವಾದ ಬಂದಿದೆ. ಖಾತೆ ಹ್ಯಾಕ್ ಆಗಿರುವುದಾಗಿ ತಿಳಿದುಬಂದಿದ್ದು, ಮೇಲಧಿಕಾರಿಗಳ ನಿರ್ದೇಶನದಂತೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ.> ಲೀಲಾವತಿ ಓಲೇಕಾರ, ಪ್ರಭುನಗರ ಹೊನ್ನಾಪುರ ಪಿಡಿಒ