ಕೋಲಾರದಲ್ಲಿ ನಮ್ಮ ಕೋಲಾರ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ, ಮುಖಂಡರಾದ ಕಾಮದೇನಹಳ್ಳಿ ವೆಂಕಟಾಚಲಪತಿ, ಮಾರ್ಜೆನಹಳ್ಳಿ ನಾರಾಯಣಸ್ವಾಮಿ ಇತರರು ಇದ್ದರು. 
ಜಿಲ್ಲೆ

ನರೇಗಾ ಅಕ್ರಮ ತಡೆಗೆ ಪಟ್ಟು

Webdesk - Narayanaswamy

ಕೋಲಾರ: ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಯುತ್ತಿದ್ದು, ಅಧ್ಯಕ್ಷ ಮತ್ತು ಪಿಡಿಒಗಳ ಶಾಮೀಲಾಗಿದ್ದಾರೆಂದು ಸಾರ್ವಜನಿಕರಿಂದ ದೂರಗಳು ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೋಲಾರ ತಾಲೂಕು ಕಚೇರಿಯಲ್ಲಿ ಮೂಲಸೌಲಭ್ಯ ಕಲ್ಪಿಸಬೆಕು ಎಂದು ನಮ್ಮ ಕೋಲಾರ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಗುತ್ತಿಗೆದಾರರು ಯಥ್ರಗಳಿಂದ ಕಾಮಗಾರಿ ನಡೆಸುತ್ತಿದ್ದು, ಕೂಲಿ ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ. ನಕಲಿ ಕೂಲಿಕರ್ಮಿಕರ ಜಾಬ್ ಕಾರ್ಡ್ಗಳಿಗೆ ಹಣ ಹಾಕಿ ಗುತ್ತಿಗೆದಾರರಿಗೆ ನೆರವಾಗಲಾಗುತ್ತಿದೆ. ಇದರಿಂದ ನೈಜ ಕೂಲಿಕಾರ್ಮಿಕರಿಗೆ ಪ್ರಯೋಜನವಾಗುತ್ತಿಲ್ಲ. ನಾನಾ ಕಡೆ ಕಾಮಗಾರಿ ಮಾಡದೆ ಹಣ ಲಪಟಾಯಿಸಿರುವ ಬಗ್ಗೆ ದೂರುಗಳಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇನ್ನು ಕೋಲಾರ ತಾಲೂಕು ಕಚೇರಿಯಲ್ಲಿ ಮೂಲಸೌಲಭ್ಯಗಳ ಕೊರತೆಯಿದ್ದು, ಮುಖ್ಯವಾಗಿ ಸಾರ್ವಜನಿಕರಿಗೆ ಶೌಚಗೃಹದ ವ್ಯವಸ್ಥೆ ಇಲ್ಲ. ಮಹಿಳೆಯರು ಪರಿದಾಡುವಂತಹ ಪರಿಸ್ಥಿತಿ ಇದೆ. ಈ ಕೂಡಲೇ ತಾಲೂಕು ಕಚೇರಿ ಆವಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣ ಮಾಡಬೇಕು. ವೃದ್ಧರು ಹಾಗೂ ಹಿರಿಯ ನಾಗರಿಕರು ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಲು ಆಗಮಿಸುವುದರಿಂದ ಅವರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಬೇಕು ಎಮದು ಒತ್ತಾಯಿಸಿದರು.
ಸಂಘದ ಮುಖಂಡರಾದ ಕಾಮದೇನಹಳ್ಳಿ ವೆಂಕಟಾಚಲಪತಿ, ಮಾರ್ಜೆನಹಳ್ಳಿ ನಾರಾಯಣಸ್ವಾಮಿ, ಹೊಳಲಿ ನಾರಾಯಣಪ್ಪ, ದೊಡ್ನಹಳ್ಳಿ ವೆಂಕಟರಮಣಪ್ಪ, ಕೆಂಬೋಡಿ ರವಿ, ಕೃಷ್ಣೆಗೌಡ ಇತರರು ಇದ್ದರು.