ನರೇಗಲ್ಲ: ಪಟ್ಟಣ ಸೇರಿ ಪಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಅನೇಕ ವಾರ್ಡ್ಗಳಲ್ಲಿ 5 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪಪಂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ ಗ್ರಾಮಗಳನ್ನೊಳಗೊಂಡ ಪಪಂ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಜನಸಂಖ್ಯೆ ಇದೆ. ಕೊಳವೆಬಾವಿಗಳೇ ಕುಡಿಯುವ ನೀರಿನ ಮೂಲಗಳಾಗಿವೆ. ಇವುಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಪಪಂ ವ್ಯಾಪ್ತಿಯಲ್ಲಿ 54 ಕೊಳವೆ ಬಾವಿಗಳಿದ್ದು, ಇದರಲ್ಲಿ 21 ಬೋರ್ವೆಲ್ಗಳಿಂದ ನೀರು ಪೂರೈಕೆಯಾಗುತ್ತಿದೆ. ಪ್ರಮುಖವಾಗಿ ಗಡ್ಡಿ ಹಳ್ಳದ 7 ಕೊಳವೆ ಬಾವಿಗಳು 8 ವಾರ್ಡ್ಗಳಿಗೆ ನೀರು ಪೂರೈಸುತ್ತಿವೆ. ಉಳಿದಂತೆ ಇತರೆಡೆ ಇರುವ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕಗಳು:
ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡಿ ಪಪಂ ವ್ಯಾಪ್ತಿಯಲ್ಲಿ 10 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಇದರಲ್ಲಿ ಮೂರು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 7 ಘಟಕಗಳಲ್ಲಿ ನಿರ್ವಹಣೆ ಕೊರತೆಯಿಂದ ಯಂತ್ರೋಪಕರಣಗಳು ಹಾಳಾಗಿವೆ. ಈ ಘಟಕಗಳಿಗೆ ಬೀಗ ಹಾಕಿ ವರ್ಷಗಳೇ ಕಳೆದಿವೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ, ಅವುಗಳನ್ನು ಖಾಸಗಿಯವರಿಗೆ ಟೆಂಡರ್ ನೀಡಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬಹುಗ್ರಾಮ ಯೋಜನೆಯ ನೀರೂ ಇಲ್ಲ:
ಕಳೆದ ವರ್ಷವೂ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆ ಉಂಟಾಗಿತ್ತು. ಆಗ ಶಾಸಕ ಕಳಕಪ್ಪ ಬಂಡಿ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಗಜೇಂದ್ರಗಡ ರಸ್ತೆಯ ನಿಡಗುಂದಿಕೊಪ್ಪ ಕ್ರಾಸ್ನಿಂದ ಗಡ್ಡಿಹಳ್ಳದ ಪಂಪ್ ಹೌಸ್ವರೆಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ಗೆ ಸಂಪರ್ಕ ಮಾತ್ರ ಸಾಧ್ಯವಾಗಿಲ್ಲ.
ಶಾಶ್ವತ ಕುಡಿಯುವ ನೀರಿನ ಯೋಜನೆ ನನೆಗುದಿಗೆ:
ನರೇಗಲ್ಲ, ಗಜೇಂದ್ರಗಡ, ರೋಣ ಸೇರಿ 7 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಆರಂಭಿಸಲಾದ ಯೋಜನೆಯು ದಶಕ ಕಳೆದರೂ ಮುಗಿದಿಲ್ಲ. ತಾಲೂಕಿನ ಜಿಗಳೂರ ಸಮೀಪ 370 ಎಕರೆ ಪ್ರದೇಶದಲ್ಲಿ ಸುಮಾರು 124 ಕೋಟಿ ರೂ. ಅನುದಾನದಲ್ಲಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿ ಮುಗಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಕೆರೆಯಿಂದ ನೀರು ಸರಬರಾಜು ಮಾಡಲು ಪಪಂ ವತಿಯಿಂದ 1.67 ಕೋಟಿ ರೂ. ಅನುದಾನ ನೀಡಲಾಗಿದ್ದು, ಪಟ್ಟಣದವರೆಗೆ ಪೈಪ್ಲೈನ್ ಹಾಗೂ ಎರಡು ಬೃಹತ್ ಗಾತ್ರದ ಮೇಲ್ತೊಟ್ಟಿಗಳನ್ನು ನಿರ್ವಿುಸಿ 10 ವರ್ಷ ಕಳೆಯುತ್ತ ಬಂದರೂ ಹನಿ ನೀರು ಪೂರೈಕೆಯಾಗಿಲ್ಲ.
ಅನಧಿಕೃತ ನಳಗಳಿಗಿಲ್ಲ ಕಡಿವಾಣ
ಪಪಂ ವ್ಯಾಪ್ತಿಯಲ್ಲಿ ಸುಮಾರು 3500 ಅಧಿಕೃತ ನಳಗಳಿದ್ದರೆ, ಇದರಲ್ಲಿ 250ಕ್ಕೂ ಅಧಿಕ ಅನಧಿಕೃತ ನಳಗಳಿವೆ. ಹಲವಾರು ವರ್ಷಗಳಿಂದ ಪ್ರತಿಯೊಂದು ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಅನಧಿಕೃತ ನಳಗಳನ್ನು ಬಂದ್ ಮಾಡಿ ಎಂದು ಪಕ್ಷಾತೀತವಾಗಿ ಮನವಿ ಮಾಡಿದರೂ, ಇಲ್ಲಿಯವರೆಗೆ ಒಂದೇ ಒಂದು ಅನಧಿಕೃತ ನಳವನ್ನು ಬಂದ್ ಮಾಡಲು ಪಪಂ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ಪಪಂ ಮಾಜಿ ಸದಸ್ಯರೊಬ್ಬರ ಆರೋಪವಾಗಿದೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ವಣವಾಗುತ್ತದೆ. ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ನೀರಿನ ವ್ಯವಸ್ಥೆ ಮಾಡಬೇಕು. ವೃದ್ಧರು, ಮಹಿಳೆಯರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ವಣವಾಗುವ ವರೆಗೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುತ್ತಾರೆ. ಆದಷ್ಟು ಬೇಗ ಪಟ್ಟಣಕ್ಕೆ ಅವಶ್ಯವಿರುವಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.| ವಿ.ಕೆ. ಸಂಗನಾಳ, ಎ.ಎಸ್. ಬಾಳಿಕಾಯಿ, 16ನೇ ವಾರ್ಡ್ ನಿವಾಸಿ
ನರೇಗಲ್ಲ ಪಟ್ಟಣ ಸೇರಿ ಮಜರೆ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಕುಸಿದಿದೆ. ಆದ್ದರಿಂದ ಜಿಗಳೂರು ಕೆರೆಯ ಪ್ರದೇಶದಲ್ಲಿ ಹೊಸದಾಗಿ 8 ಕೊಳವೆ ಬಾವಿಗಳನ್ನು ಕೊರೆಸಲು ಒಪ್ಪಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಅನುಮತಿ ಬಂದ ತಕ್ಷಣ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ಮುಗಿದಿದ್ದು, ಇನ್ನೂ 15 ದಿನದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕ ಪಡೆಯಲಾಗುತ್ತದೆ. ಜಿಗಳೂರ ಕೆರೆಯ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಇದರಿಂದ ನೀರು ಪಡೆಯುವುದು ಅಸಾಧ್ಯವಾಗಿದೆ. | ಎಂ.ಎ. ನೂರುಲ್ಲಾಖಾನ್ ಪ್ರಭಾರಿ ಮುಖ್ಯಾಧಿಕಾರಿ, ನರೇಗಲ್ಲ ಪಪಂ