ಜಿಲ್ಲೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು

ಚಿತ್ರದುರ್ಗ: ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡೋಣ. ಅದಕ್ಕೆ ಬಿಜೆಪಿಯ ಎಲ್ಲರೂ ಹಗಲಿರುಳು ಶ್ರಮಿಸೋಣ ಎಂದು ಪಕ್ಷದ ಮುಖಂಡ ಎಂ.ಸಿ.ರಘುಚಂದನ್ ಸಲಹೆ ನೀಡಿದರು.

ಜಿಲ್ಲೆಯ ನಾಯಕನಹಟ್ಟಿ, ಮೊಳಕಾಲ್ಮುರು ಮಂಡಲಗಳಿಗೆ ಶುಕ್ರವಾರ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಚಿತ್ರದುರ್ಗ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ದುಡಿಯೋಣ. ಮೋದಿ ಅವರ ಕೈ ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹೀಗಾಗಿ ಈಗಿನಿಂದಲೇ ಪಕ್ಷ ಬಲಪಡಿಸಬೇಕಿದೆ. ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದಿದ್ದರೂ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿ ಕೊಡುವ ವಿಶ್ವಾಸವಿದೆ ಎಂದರು.

ಪ್ರಧಾನಿ ಅವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಗೊಳಿಸಿ ಭಾರತೀಯರ 500 ವರ್ಷಗಳ ಕನಸನ್ನು ನನಸುಗೊಳಿಸಿ, ಹಿಂದುಗಳ ಭಾವನೆ ಎತ್ತಿ ಹಿಡಿದಿದ್ದಾರೆ. ಆರ್ಥಿಕ ವಹಿವಾಟಿನಲ್ಲೂ ದೇಶವೀಗ 5ನೇ ಸ್ಥಾನದಲ್ಲಿರುವುದರಿಂದ ಅವರೇ ಇನ್ನೊಮ್ಮೆ ಪಿಎಂ ಆಗಬೇಕು ಎಂದರು.

ನಾಯಕನಹಟ್ಟಿ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನೇರಲಹಳ್ಳಿ, ತುಮಕೂರ್ಲಹಳ್ಳಿ, ರಾಯಾಪುರ, ಮೊಳಕಾಲ್ಮುರು, ಹಾನಗಲ್, ನುಂಕಿಮಲೆ, ಹಿರೇಹಳ್ಳಿ, ಚಿಕ್ಕೇರಹಳ್ಳಿ, ನಾಗಸಮುದ್ರ, ಸಿದ್ದಾಪುರ, ದೇವಸಮುದ್ರ, ರಾಂಪುರ, ಗೌರಸಮುದ್ರ, ಉಳ್ಳಾರ್ತಿ ಗ್ರಾಮಗಳಿಗೆ ಭೇಟಿ ನೀಡಿ ಸಂಘಟನಾತ್ಮಕವಾಗಿ ಕೆಲಸ ಮಾಡಲು ಸಲಹೆ ನೀಡಿದರು.

ಮುಖಂಡರಾದ ಮಹೇಶ್, ಶಿವಣ್ಣ, ನಾಗರಾಜ್, ರಾಮಣ್ಣ, ಪ್ರಭು, ತಿಪ್ಪೇಸ್ವಾಮಿ ಇತರರಿದ್ದರು.