ಜಿಲ್ಲೆ

ನರಗುಂದದಲ್ಲಿ ರೈತರ ಸಂಭ್ರಮಾಚರಣೆ

Gadag

ನರಗುಂದ: ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಮಹದಾಯಿ ಹೋರಾಟಗಾರರ ಹಷೋದ್ಗಾರ ಮುಗಿಲು ಮುಟ್ಟಿತ್ತು.

ಪಟ್ಟಣದಲ್ಲಿ ನಡೆಸುತ್ತಿರುವ ನಿರಂತರ ಧರಣಿ ವೇದಿಕೆಯಲ್ಲಿ (1680ನೇ ದಿನ) ರೈತರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದರು.

ಮಹದಾಯಿ ಹೋರಾಟಗಾರ ಎಸ್.ಬಿ. ಜೋಗಣ್ಣವರ ಮಾತನಾಡಿ, ‘ಈ ಯೋಜನೆ ಕೈಗೂಡುವುದಿಲ್ಲ. ಏಕೆ ಹೋರಾಟ ಮಾಡುತ್ತಿದ್ದೀರಿ ಎಂದು ಕೆಲವರು ರೈತರನ್ನು ಕಿಚಾಯಿಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್ ಆದೇಶದಿಂದ ರೈತರಲ್ಲಿ ಸಂತೋಷ ಇಮ್ಮಡಿಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ನಾದರೂ ಈ ಮಹತ್ವದ ಯೋಜನೆಗೆ ಅಗತ್ಯ ಅನುದಾನವನ್ನು ಸದ್ಯದ ಬಜೆಟ್​ನಲ್ಲಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ಯಂಕಪ್ಪ ಹುಜರತ್ತಿ, ಅರ್ಜನ ಮಾನೆ, ರಾಘವೇಂದ್ರ ಗುಜಮಾಗಡಿ, ರಾಮು ಸಾಬಳೆ, ಫಕೀರಪ್ಪ ಅಣ್ಣಿಗೇರಿ, ಹನುಮಂತ ಸರನಾಯ್ಕರ, ನಾಗಪ್ಪ ಹಾಲೋಳ್ಳಿ, ಶಂಕ್ರಪ್ಪ ಜಾಧವ, ಬಸಪ್ಪ ಗುಡದರಿ, ಶಾಂತವ್ವ ಭೂಸರಡ್ಡಿ, ಸರೋಜಾ ಜಾಧವ, ಪ್ರೇಮಾ ಭೋಸಲೆ, ರಾಯವ್ವ ಕಟಗಿ, ಕಾಳವ್ವ ಭೋವಿ, ರಾಮಕೃಷ್ಣ ನಿಗಡೆ, ಮಾರುತಿ ಬಡಿಗೇರ, ಇತರರು ಉಪಸ್ಥಿತರಿದ್ದರು.

ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಳೆದ ನಾಲ್ಕೈದು ದಶಕಗಳಿಂದ ಕಳಸಾ-ಬಂಡೂರಿಗೆ ಆಗ್ರಹಿಸಿ ಹೋರಾಟ ಆರಂಭಿಸಿದ್ದೇವೆ. ಆದರೆ, ರಾಜಕೀಯ ವ್ಯಕ್ತಿಗಳು ಇದನ್ನು ದಾಳವಾಗಿ ಬಳಸಿಕೊಂಡು ಉತ್ತರ ಕರ್ನಾಟಕದ ರೈತರ ಕಣ್ಣಿಗೆ ಮಣ್ಣೆರಚುತ್ತಿದ್ದರು. ಆದರೆ, ಗುರುವಾರದ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಎಲ್ಲ ರಾಜಕೀಯ ಪಕ್ಷದ ಮುಖಂಡರಿಗೆ ಮುಖಭಂಗವಾಗಿದೆ. ಇನ್ನಾದರೂ ರಾಜಕಾರಣಿಗಳು ಈ ಮಹತ್ವದ ಯೋಜನೆ ಯಶಸ್ವಿಗೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು.| ವಿಜಯ ಕುಲಕರ್ಣಿ ಕಳಸಾ ಬಂಡೂರಿ ಹೋರಾಟಗಾರ