ಸಿಂಧನೂರು ತಾಲೂಕಿನ ತಿಮ್ಮಾಪುರ ಏತ ನೀರಾವರಿ ಯೋಜನೆ ನೀರು ಹರಿಸುವಿಕೆ ಕಾರ್ಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ನೀರಾವರಿ ಇಲಾಖೆ ಇಇ ಸತ್ಯನಾರಾಯಣ, ಜಿಪಂ ಮಾಜಿ ಸದಸ್ಯ ಬಸನಗೌಡ ಬಾದರ್ಲಿ, ಛತ್ರಪ್ಪ, ಹುಲಿಗೆಯ್ಯ, ಹನುಮಂತ ಯಾಪಲಪರ್ವಿ ಇದ್ದರು. 
ಜಿಲ್ಲೆ

ನೀರು ನಿರ್ವಹಣೆಗೆ ಇಲಾಖೆ ಕಾಳಜಿ ವಹಿಸಲಿ

ಸಿಂಧನೂರು: ರೈತರ ಮಹತ್ವಾಕಾಂಕ್ಷೆಯ ತಿಮ್ಮಾಪುರ ಏತ ನೀರಾವರಿ ಯೋಜನೆಯ ಲಾಭವನ್ನು ಈ ಭಾಗದ ರೈತರು ಪಡೆದುಕೊಂಡು ಉತ್ತಮ ಬೆಳೆ ಬೆಳೆದುಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಾಲೂಕಿನ ಒಳಬಳ್ಳಾರಿ-ಹೆಡಗಿನಾಳ ಮಧ್ಯದಲ್ಲಿ ತುಂಗಭದ್ರಾ ನದಿ ದಂಡೆಯಲ್ಲಿರುವ ತಿಮ್ಮಾಪುರ ಏತ ನೀರಾವರಿ ಯೋಜನೆ ನೀರು ಹರಿಸುವಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಳಿಸಲಾಗಿತ್ತು. ನದಿಯಲ್ಲಿ ನೀರಿಲ್ಲದಿರುವುದರಿಂದ ನೀರಿನ ಸೌಕರ್ಯ ಒದಗಿಸಲು ಸಾಧ್ಯವಾಗಿರಲಿಲ್ಲ. ಈಗ ನದಿ ತುಂಬಿ ಹರಿಯುತ್ತಿರುವುದರಿಂದ ಯೋಜನೆಯಡಿ ರೈತರು ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಪಡೆದುಕೊಳ್ಳಬಹುದಾಗಿದೆ. ಕಾಲುವೆ ನೀರಿನ ಜತೆಗೆ ಈ ನೀರನ್ನು ಸದ್ಬಳಕೆ ಮಾಡಿಕೊಂಡು ಯೋಜನೆ ಲಾಭ ಪಡೆದುಕೊಳ್ಳಬೇಕು. ನೀರಾವರಿ ಇಲಾಖೆ ಕೂಡ ನಿರ್ವಹಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ನೀರಾವರಿ ಇಲಾಖೆ ಇಇ ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ, ಸದ್ಯ ಮೊದಲ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ಜತೆಗೆ ಕಾಲುವೆ ನೀರನ್ನು ಬಳಸಿಕೊಂಡು ಕೃಷಿ ಕೈಗೊಳ್ಳಬೇಕು ಎಂದರು.