ಬೀಳಗಿ: ದೇಶದ ಸ್ವಾತಂತ್ರೊೃೀತ್ಸವಕ್ಕೆ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್‌ಸಿಂಗ್, ಡಾ. ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು ಹಾಗೂ ಮಹಾನ್ ನಾಯಕರ ಕೊಡುಗೆ ಅಪಾರ. ಅವರನ್ನು ಸ್ಮರಿಸಬೇಕಾಗಿದ್ದು, ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸ್ಥಳೀಯ ತಾಲೂಕು ಆಡಳಿತ ವತಿಯಿಂದ ನಡೆದ 77ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ದೇಶದಲ್ಲಿ 139 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಶೇ. 60 ರಷ್ಟು ಯುವಕರು 40 ವರ್ಷದೊಳಗಿನವರು ಇದ್ದಾರೆ. ಯುವಕರು ಭೂತಾಯಿ ಉಳುಮೆಯಲ್ಲಿ ತೊಡಗುವುದಿಲ್ಲ. ಇದರಿಂದ ದೇಶಕ್ಕೆ ಮಾರಕವಾಗಲಿದೆ. ಮಕ್ಕಳಿಗೆ ಮೌಲ್ಯಯುತ ಸಂಸ್ಕಾರ ಕೊಟ್ಟು ದೇಶಪ್ರೇಮಿಗಳನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿ ಇದೆ. ಈ ದಿಸೆಯಲ್ಲಿ ನಾವು ಶಿಕ್ಷಕರನ್ನು ಕೂಡ ಗೌರವದಿಂದ ಕಾಣಬೇಕಾಗಿದೆ ಎಂದರು.
ಜನರ ಮನಸ್ಸು ಒಡೆಯುವಂತಹ ವಾತಾವರಣ ದೇಶದಲ್ಲಿ ನಿರ್ಮಾಣ ಆಗುತ್ತಿದೆ. ಇದೇ ರೀತಿ ಮುಂದುವರಿದರೆ ದೇಶದ ಸ್ಥಿತಿ ಭಯಾನಕ ಆಗುವ ಆಂತಕ ಇದೆ. ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕಾಗಿದೆ. ಹಿಂದುಗಳು ಮತ್ತು ಮುಸ್ಲಿಮರಲ್ಲಿ ಒಂದೇ ರಕ್ತ ಹರಿಯುತ್ತಿದೆ. ಎಲ್ಲರನ್ನು ಗೌರವದಿಂದ ಕಂಡು ಒಂದೇ ತಾಯಿಯ ಮಕ್ಕಳಂತೆ ಬದುಕು ಸಾಗಿಸಬೇಕಾಗಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಸಾಲ ಮಾಡಲಾಗಿದೆ. ಅದನ್ನು ಮೆಟ್ಟಿನಿಂತು ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಉಳಿದ ಎರಡು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಸರ್ಕಾರದ ಯೋಜನೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಸುಹಾಸ ಇಂಗಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ವಿಶ್ವದಲ್ಲಿಯೇ ಮಾದರಿಯಾಗಿದೆ. ಎಲ್ಲರೂ ದೇಶಾಭಿಮಾನ ಮೈಗೂಡಿಸಿಕೊಂಡು ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರ ಅದರ್ಶಗಳನ್ನು ಪಾಲನೆ ಮಾಡೋಣ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಶಾಲೆ ಮಕ್ಕಳಿಗೆ ಕೊಡಮಾಡಿದ 2ಸಾವಿರ ನೋಟ್‌ಬುಕ್‌ಗಳನ್ನು ಶಾಸಕ ಜೆ.ಟಿ.ಪಾಟೀಲ ಆಯಾ ಶಾಲಾ ಮುಖ್ಯಸ್ಥರಿಗೆ ವಿತರಣೆ ಮಾಡಿದರು. ಕಾರ್ಮಿಕರ ಮಕ್ಕಳಿಗೆ ಕಿಟ್ ಹಂಚಿದರು.
ತಾಪಂ ಇಒ ಸಿದ್ದು ನಕ್ಕರಗುಂದಿ, ಬಿಇಒ ಅರ್.ಎಸ್. ಆದಾಪೂರ, ಆರೋಗ್ಯಾಧಿಕಾರಿ ಡಾ. ದಯಾನಂದ ಕರೆಣ್ಣವರ, ಪಿಎಸ್‌ಐ ಮಂಜುನಾಥ ತಿರಕ್ಕನ್ನವರ, ಗ್ರೇಡ್ 2 ಆನಂದ ಕೊಲ್ಹಾರ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಇದ್ದರು.