ಜಿಲ್ಲೆ

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್‌ನಿಂದ ಕೆ.ಎಚ್.ರಾಮಯ್ಯಜಯಂತಿ ಆಚರಣೆ

ಮೈಸೂರು: ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್‌ನಿಂದ ಕೆ.ಎಚ್.ರಾಮಯ್ಯ ಅವರ 144ನೇ ಜಯಂತಿ ಕಾರ್ಯಕ್ರಮವನ್ನು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರಾಮಯ್ಯ ಅವರ ಸಮಾಧಿ ಬಳಿ ಬುಧವಾರ ಸರಳವಾಗಿ ಆಚರಿಸಲಾಯಿತು
ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ದೊಡ್ಡಬಳ್ಳಾಪುರದ ಕಲ್ಲುದೇವರಹಳ್ಳಿಯಲ್ಲಿ ಹುಟ್ಟಿದ ರಾಮಯ್ಯ ಅವರು ಮೈಸೂರು ಸಂಸ್ಥಾನದ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕೆ.ರಾಮಯ್ಯ ಅವರ ಸ್ವಜಾತಿ ಪ್ರೇಮ, ಅನ್ಯಜಾತಿಯ ಸ್ನೇಹಿತರ ಜತೆ ಇದ್ದ ಬಾಂಧವ್ಯಗಳಿಗೆ ಕಂದಕ ತರುವಂತೆ ಆಗಿರಲಿಲ್ಲ. ಹಿಂದುಳಿದ ವರ್ಗಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತಿಲ್ಲವೆಂದು ದನಿ ಎತ್ತಿ ಚಳವಳಿಯೊಂದನ್ನು ರೂಪಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಬಗ್ಗೆ ಗಮನ ಗಹರಿಸುವಂತೆ ಮಾಡಿದ್ದರಿಂದ ಬ್ರಾಹ್ಮಣೇತರರಿಗೆ ಸರ್ಕಾರಿ ಹುದ್ದೆಗಳನ್ನು ಮೀಸಲಿಡುವ ಪದ್ಧತಿ ಜಾರಿಗೆ ಬಂತು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತಿದ್ದ ರಾಮಯ್ಯ ಅವರು, ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ಇಲಾಖೆಯನ್ನು ಸ್ಥಾಪಿಸಿದರು. ಪ್ರತಿಯೊಂದು ಜನಾಂಗವು ತಮ್ಮ-ತಮ್ಮ ಜನಾಂಗದ ಏಳಿಗೆಗಾಗಿ ರಚಿಸಿಕೊಂಡ ಸಂಘ ಸಂಸ್ಥೆಗಳಿಗೆ ಕೆ.ಎಚ್.ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ, ಮಾರ್ಗದರ್ಶಕರನ್ನಾಗಿ ಮಾಡಿಕೊಂಡರು ಎಂದರು.
ದಲಿತರಿಗೆ ಶಿಕ್ಷಣ ಕೊಡಬೇಕೆಂಬ ಯೋಜನೆಯನ್ನು ಮಹಾರಾಜರ ಗಮನಕ್ಕೆ ತಂದು ಅವರಿಗಾಗಿ ಪ್ರತ್ಯೇಕ ಶಾಲೆಗಳನ್ನು ಈಗಿನ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸ್ವತಃ ನಾಲ್ವಡಿ ಕೃಷ್ಣರಾಜ ಒಡೆಯರೇ ಉದ್ಘಾಟಿಸುವಂತೆ ಮಾಡಿದ್ದರು. ಆ ಶಾಲೆಗೆ ಉಪಾಧ್ಯಾಯರೊಬ್ಬರು ದೊರಕುವುದೇ ದುರ್ಲಬವಾಯಿತು. ಆಗ ಅರಸರು ತಲಕಾಡಿನ ರಂಗೇಗೌಡರನ್ನು ನೇಮಿಸುವ ಮೂಲಕ ದಲಿತರಿಗೆ ಶಿಕ್ಷಣ ದೊರೆಯುವಂತೆ ನೋಡಿಕೊಂಡರು. ಆದಿದ್ರಾವಿಡ ಸಂಘ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿ ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ಸೇವೆ ಮಾಡುವಂತೆ ಪ್ರಚೋದಿಸಿದರು. ಆದ್ದರಿಂದ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವ ಕಾರ್ಯಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವ್, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮುಖಂಡರಾದ ಕೆ.ಪಿ.ಬಸವಗೌಡ, ಎಂ.ಜಿ.ನಾರಾಯಣ್, ಕುಮಾರ್‌ಗೌಡ, ರವಿ ರಾಜಕೀಯ, ಕೆ.ಎಚ್.ರಾಮಯ್ಯ ಹಾಸ್ಟೆಲ್ ವ್ಯವಸ್ಥಾಪಕ ನಿರ್ವಾಹಕ ಕೃಷ್ಣಪ್ಪ ಇತರರಿದ್ದರು.