ಮಾದಪ್ಪನಿಗೆ ಹರಕೆ ಹೊತ್ತು ಸಾಗಿದ ಯುವಕರು
ಹನೂರು : ಕಷ್ಟ -ಕಾರ್ಪಣ್ಯಗಳು ನಿವಾರಣೆಯಾಗಲಿ, ದೋಶ ದೂರವಾಗಲಿ, ಕರ್ಮ ಕಳೆಯಲಿ ಎನ್ನುವ ಉದ್ದೇಶದಿಂದ ಬಹುತೇಕ ಭಕ್ತರು ಹರಕೆ ಹೊತ್ತು ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳುವುದು ಸಾಮಾನ್ಯ. ಆದರೆ ಗ್ರಾಮವೊಂದರ ಯುವಕರ ಗುಂಪು ‘ನಮ್ಮೂರಿನ ಹುಡುಗರಿಗೆ ಮದುವೆಯಾಗಲು ಕನ್ಯೆ (ಹೆಣ್ಣು) ಸಿಗಲಿ’ ಎಂದು ಹರಕೆ ಹೊತ್ತು ಸನ್ನಿಧಿಗೆ ತೆರಳುತ್ತಿದ್ದ ಅಪರೂಪದ ಪ್ರಸಂಗ ಬುಧವಾರ ಹನೂರಿನಲ್ಲಿ ನಡೆದಿದೆ.
ಕೊಳ್ಳೆಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವಕರ ಗುಂಪೇ ಈ ಸಂಬಂಧ ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಿದ್ದವರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಯುವಕರು ಮಾತನಾಡಿ, ವಯಸ್ಸಿಗೆ ಬಂದಿರುವ ನಮ್ಮೂರಿನ 62 ಯುವಕರಿಗೆ ಹೆಣ್ಣು ಸಿಗದ ಕಾರಣದಿಂದ ಇನ್ನೂ ಮದುವೆಯಾಗಿಲ್ಲ. ಇದರಿಂದ ಅವರೆಲ್ಲರ ಜೀವನ ನಿರ್ವಹಣೆ ಏರುಪೇರಾಗಿದೆ. ಹಾಗಾಗಿ ಮಾದಪ್ಪ ಕರುಣೆ ತೋರಿ ಹೆಣ್ಣು ( ಕನ್ಯೆ) ಸಿಗುವಂತೆ ಮಾಡಲಿ. ಅವರೆಲ್ಲರ ಕೌಟುಂಬಿಕ ಬದುಕು ಸುಗಮವಾಗಿ ಸಾಗಲಿ. ಇದಕ್ಕೆ ಮಹದೇವ ಅನುಗ್ರಹ ಮಾಡಲಿ ಎಂಬ ಉದ್ದೇಶದಿಂದ ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದೇವೆ ಎಂದು ವಿವರಿಸಿದರು. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದು, ಇದ್ದವರೂ ಹೆಚ್ಚಿನ ವ್ಯಾಸಂಗ ಮಾಡಿ ನಗರ ಪ್ರದೇಶದತ್ತ ಮುಖ ಮಾಡಿರುವುದು,
ಐಷಾರಾಮಿ ಜೀವನದ ವರರನ್ನೇ ವಿವಾಹವಾಗಲು ಬಯಸಿರುವುದು, ಹೆಚ್ಚಿನ ವೇತನ ಮತ್ತು ಉನ್ನತ ಶ್ರೇಣಿ ಬದುಕಿನ ಕಡೆಗೆ ಮುಖ ಮಾಡಿರುವುದೇ ಗ್ರಾಮೀಣ ಯುವಕರಿಗೆ ಕನ್ಯೆಯರು ದೊರಕದಿರಲು ಕಾರಣವಾಗಿದೆ ಎನ್ನಲಾಗಿದೆ.