ಜಿಲ್ಲೆ

ನಮ್ಮೂರಿನ ಹುಡುಗರಿಗೆ ಕನ್ಯೆ ಸಿಗಲಿ!

ಹನೂರು: ಕಷ್ಟ -ಕಾರ್ಪಣ್ಯಗಳು ನಿವಾರಣೆಯಾಗಲಿ, ದೋಷ ದೂರವಾಗಲಿ, ಕರ್ಮ ಕಳೆಯಲಿ ಎನ್ನುವ ಉದ್ದೇಶದಿಂದ ಬಹುತೇಕ ಭಕ್ತರು ಹರಕೆ ಹೊತ್ತು ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳುವುದು ಸಾಮಾನ್ಯ. ಆದರೆ ಗ್ರಾಮವೊಂದರ ಯುವಕರು ‘ನಮ್ಮೂರಿನ ಹುಡುಗರಿಗೆ ಮದುವೆಯಾಗಲು ಕನ್ಯೆ (ಹೆಣ್ಣು) ಸಿಗಲಿ’ ಎಂದು ಹರಕೆ ಹೊತ್ತು ಸನ್ನಿಧಿಗೆ ತೆರಳುತ್ತಿದ್ದ ಅಪರೂಪದ ಪ್ರಸಂಗ ಬುಧವಾರ ನಡೆದಿದೆ.

ಕೊಳ್ಳೆಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವಕರ ಗುಂಪು ವಿಶೇಷ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ಹೊರಟಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಯುವಕರು ಮಾತನಾಡಿ, ವಯಸ್ಸಿಗೆ ಬಂದಿರುವ ನಮ್ಮೂರಿನ 62 ಯುವಕರಿಗೆ ಹೆಣ್ಣು ಸಿಗದ ಕಾರಣ ಇನ್ನೂ ಮದುವೆಯಾಗಿಲ್ಲ. ಇದರಿಂದ ಅವರೆಲ್ಲರ ಜೀವನ ನಿರ್ವಹಣೆ ಏರುಪೇರಾಗಿದೆ. ಹಾಗಾಗಿ ಮಾದಪ್ಪ ಕರುಣೆ ತೋರಿ ಹೆಣ್ಣು ಸಿಗುವಂತೆ ಮಾಡಲಿ. ಅವರೆಲ್ಲರ ಕೌಟುಂಬಿಕ ಬದುಕು ಸುಗಮವಾಗಿ ಸಾಗಲಿ. ಇದಕ್ಕೆ ಮಹದೇವ ಅನುಗ್ರಹ ಮಾಡಲಿ ಎಂಬ ಪ್ರಾರ್ಥಿಸಿ, ಹರಕೆ ಹೊತ್ತು ಪಾದಯಾತ್ರೆಯಲ್ಲಿ ಮಾದಪ್ಪನ ಬೆಟ್ಟಕ್ಕೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.

ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದು, ಇದ್ದವರೂ ಹೆಚ್ಚಿನ ವ್ಯಾಸಂಗ ಮಾಡಿ ನಗರ ಪ್ರದೇಶದತ್ತ ಮುಖ ಮಾಡಿರುವುದು, ಆಸ್ತಿ-ಅಂತಸ್ತು ಇರುವ, ಉದ್ಯೋಗ, ಹೆಚ್ಚಿನ ವೇತನ ಹೊಂದಿರುವ, ವರನನ್ನೇ ವಿವಾಹವಾಗಲು ಬಯಸಿರುವುದು, ಐಷಾರಾಮಿ ಬದುಕಿನ ಕಡೆಗೆ ಮುಖ ಮಾಡಿರುವುದೇ ಗ್ರಾಮೀಣ ಯುವಕರಿಗೆ ಕನ್ಯೆಯರು ದೊರಕದಿರಲು ಕಾರಣವಾಗಿದೆ ಎನ್ನುವುದು ಅವರ ಅಳಲಾಗಿದೆ.