ಜಿಲ್ಲೆ

ನಮ್ಮೂರ ಕೆರೆ ಉಳಿಸಿ, ನೆಲಮಂಗಲದಲ್ಲಿ ಬೈಕ್, ಕಾಲ್ನಡಿಗೆ ಜಾಥಾ, ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ

ನೆಲಮಂಗಲ: ತಾಲೂಕಿನಲ್ಲಿ ಕೆರೆಕುಂಟೆಗಳು ನೀರಿಲ್ಲದೆ ಒಣಗಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನೆಲಮಂಗಲ ಕೆರೆಯ ಬಳಿ ಶುಕ್ರವಾರ ಆಯೋಜಿಸಿದ್ದ ಕೆರೆ ಉಳಿಸಿ ಅಭಿಯಾನದಡಿ ಬೈಕ್ ಹಾಗೂ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತರ್ಜಲಮಟ್ಟ ಹೆಚ್ಚಿಸಲು ಕೆರೆಗಳ ಪಾತ್ರ ಅತ್ಯಂತ ಹಿರಿದಾದದ್ದು. ಆದ್ದರಿಂದ, ಕೆರೆಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ನೆಲಮಂಗಲ ಹಾಗೂ ಭಿನ್ನಮಂಗಲ ಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಗರದ ಕೊಳಚೆನೀರು ಸೇರಿ ಅವು ತುಂಬಾ ಕಲುಷಿತಗೊಂಡಿವೆ. ನಗರದ ಕೆರೆಗಳನ್ನು ರಕ್ಷಿಸಲು ತಾಲೂಕಿನಾದ್ಯಂತ ಜನರು ಪಕ್ಷಾತೀತವಾಗಿ ಸಂಘಟನೆಗೊಂಡು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೆರೆ ಉಳಿಸಿ ಅಭಿಯಾನ ಶೀರ್ಷಿಕೆಯಡಿ ಜಾಥಾ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಕೆರೆಗೆ ಹರಿಸುತ್ತಿರುವ ಕೊಳಚೆನೀರು ತಡೆದು, ಕೆರೆ ಅಭಿವೃದ್ಧಿ ಹಾಗೂ ರಕ್ಷಣೆಗೆ ಸಹಕರಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿ, ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

6 ಕೋಟಿ ರೂ.ನಲ್ಲಿ ಅಭಿವೃದ್ಧಿ ಅಸಾಧ್ಯ: ನೆಲಮಂಗಲ ಕೆರೆಯನ್ನು 2015ರಲ್ಲಿ 3.60 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸಲಾಗಿತ್ತು. ಬಳಿಕ ನೆಲಮಂಗಲ ಯೋಜನಾ ಪ್ರಾಧಿಕಾರ ಕೆರೆ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, 130 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಕೆರೆಯನ್ನು ಕೇಲವ 6 ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸುವುದು ಅಸಾಧ್ಯ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಲವತ್ತುಕೊಂಡರು. ಸರ್ಕಾರದ ಗಮನಕ್ಕೆ ತಂದು, ಹೆಚ್ಚಿನ ಅನುದಾನ ಪಡೆದುಕೊಂಡು ಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಾಥಾ ಮತ್ತು ಮನವಿ: ನಗರದ ಬಿನ್ನಮಂಗಲ ಕೆರೆ ಬಳಿ ಸಾಮಾವೇಶಗೊಂಡ ಸ್ವಯಂಸೇವಕರು ಬೈಕ್ ಹಾಗೂ ಕಾಲ್ನಡಿಗೆ ಜಾಥಾ ಮೂಲಕ ನಗರದ ಮುಖ್ಯಬೀದಿಯಲ್ಲಿ ಸಾಗಿದರು. ನೆಲಮಂಗಲ ಮತ್ತು ಬಿನ್ನಮಂಗಲ ಕೆರೆಯಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಸಮುದಾಯ ಕೆರೆಯ ನೀರು ಬಳಕೆದಾರರ ಸಮಿತಿ ರಚಿಸಬೇಕು. ಕೆರೆಯ ಸುತ್ತ ನಡಿಗೆ ಪಥ ನಿರ್ಮಾಣ, ಉದ್ಯಾನ ನಿರ್ಮಾಣ, ಮಿನಿ ಬೋಟಿಂಗ್ ವ್ಯವಸ್ಥೆ ಅಳವಡಿಸಿವುದು ಸೇರಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಉಪತಹಸೀಲ್ದಾರ್ ಪ್ರಕಾಶ್, ರಾಜಸ್ವ ನಿರೀಕ್ಷಕ ರವಿಕುಮಾರ್, ನಗರಸಭೆ ಸದಸ್ಯರಾದ ಗಂಗಾಧರ್‌ರಾವ್, ಪುರುಷೋತ್ತಮ್, ಡಿಎಸ್‌ಓ ಸಂಘಟನೆ ಅಧ್ಯಕ್ಷ ಭಾಸ್ಕರ್‌ಪ್ರಸಾದ್, ಸಾಹಿತಿ ಮಣ್ಣೆ ಮೋಹನ್ ಮತ್ತಿತರರಿದ್ದರು.