ಮಳವಳ್ಳಿ: ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಯಾವುದೇ ಸಮಾಜದ ಬಗ್ಗೆ ಕನಿಷ್ಠ ಗೌರವವನ್ನೂ ಕೊಡದಿರುವ ವ್ಯಕ್ತಿ. ಆತನನ್ನು ಮತದಾರರು ಮನೆಗೆ ಕಳಹಿಸಿ ಎಂದು ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪಟ್ಟಣದ ಅನಂತ್‌ರಾಮ್ ವೃತ್ತದಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್‌ನ ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರ ದಂಡೆ ಬಂದು ಪ್ರಚಾರ ಮಾಡಿ ಹೋಗಿದೆ. ಆದರೇ ನಮ್ಮ ಪಕ್ಷಕ್ಕೆ ಕ್ಷೇತ್ರದಲ್ಲಿ ಕಾರ್ಯಕರ್ತರೇ ನಾಯಕರು ಮತ್ತು ಯೋಧರಿದ್ದಂತೆ. ಅವರ ಈ ಯುದ್ಧೋತ್ಸಾಹವನ್ನು ನೋಡಿದರೆ ನಮಗೆ ಇನ್ಯಾವ ಸ್ಟಾರ್ ಕ್ಯಾಂಪೇನ್‌ಗಳ ಅಗತ್ಯವಿಲ್ಲ ಎಂದರು.
ನಮ್ಮಿಂದಲೇ ರಾಜಕೀಯವಾಗಿ ಬೆಳೆದು ವಿಧಾನಪರಿಷತ್ ಸದಸ್ಯರಾಗಿದ್ದವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಅವರ ಈ ರಾಜಕೀಯ ನಡೆಯನ್ನು ಕ್ಷೇತ್ರದ ಮತದಾರ ಸೂಕ್ಷ್ಮವಾಗಿ ಗಮನಿಸಿದ್ದು, ಇದಕ್ಕೆ ತಕ್ಕ ಉತ್ತರವನ್ನು ಚುನಾವಣೆಯ ಫಲಿತಾಂಶದ ಮುಖಾಂತರ ನೀಡಲಿದ್ದಾರೆಂದು ಎಂಎಲ್‌ಸಿ ಮರಿತಿಬ್ಬೇಗೌಡ ವಿರುದ್ಧ ಕಿಡಿಕಾರಿದರು.
ನಮ್ಮ ಅಭ್ಯರ್ಥಿ ಡಾ.ಕೆ.ಅನ್ನದಾನಿ ಸರಳ ಸಜ್ಜನಿಕೆಯ ಶಾಸಕರಾಗಿ, ಪ್ರಸ್ತುತ ಅವಧಿಯಲ್ಲಿ ಜನ ಸಾಮಾನ್ಯರೊಡನೆ ಬೆರೆತು ಕೆಲಸ ಮಾಡಿದ್ದಾರೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಪಕ್ಷನಿಷ್ಠೆ ಹೊಂದಿದ್ದಾರೆ. ಸಣ್ಣಪುಟ್ಟ ವ್ಯತ್ಯಾಸಗಳೇನೇ ಇದ್ದರೂ ಬದಿಗೊತ್ತಿ ನಮ್ಮ ಅಭ್ಯರ್ಥಿಗೆ ಮತ ನೀಡಬೇಕು. ನಾನು ಸಾಯುವವರೆಗೂ ನಿಮ್ಮ ಋಣ ತೀರಿಸಲು ದುಡಿಯುತ್ತೇನೆಂದು ಕೈ ಮುಗಿದು ಮನವಿ ಮಾಡಿದರು.
ನಾಡಿನ ಬಡವರಿಗೆ ಹೊಸ ಕಾಯಕಲ್ಪ ತರಬೇಕೆಂದು ಪಂಚರತ್ನ ಯೋಜನೆಯ ಕಾರ್ಯಕ್ರಮಗಳ ಮೂಲಕ ರಾಜ್ಯದ ಉದ್ದಗಲಕ್ಕೂ ಮನವರಿಕೆ ಮಾಡಲು ಯಾತ್ರೆ ಮಾಡಿದ್ದೇನೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಗ್ರಾಮೀಣ ಪ್ರದೇಶದ ಜನರ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನುಷ್ಠಾನಕ್ಕೆ ತರಬೇಕಾದ ಪಂಚರತ್ನ ಯೋಜನೆಗಳ ಬಗ್ಗೆ ವಿವರಿಸಿದ ಕುಮಾರಸ್ವಾಮಿ ಅವರು, ಪ್ರಸ್ತತ ಚುನಾವಣೆಯಲ್ಲಿ ಪೂರ್ಣಪ್ರಮಾಣದ ಬಹುಮತ ನೀಡುವಂತೆ ಮನವಿ ಮಾಡಿದರು. ಮುಸ್ಲಿಮರು ಜೆಡಿಎಸ್‌ಗೆ ಮತ ಕೊಟ್ಟರೆ ಬಿಜೆಪಿಗೆ ಕೊಟ್ಟಂತೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ನಡೆಸಿದರೂ ನಮ್ಮನ್ನು ನಂಬಿ ಮುಸ್ಲಿಮರು ದೊಡ್ಡಮಟ್ಟದಲ್ಲಿ ಬೆಂಬಲಿಸುತ್ತಿದ್ದಾರೆ ಎಂದರು.
ಅಭ್ಯರ್ಥಿ ಡಾ.ಕೆ.ಅನ್ನದಾನಿ, ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯಾಧ್ಯಕ್ಷ ಡಿ.ಜಯರಾಮು, ಮಾಜಿ ಎಂಎಲ್ಸಿಗಳಾದ ಶ್ರೀಕಂಠೇಗೌಡ, ಅಪ್ಪಾಜೀಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಶ್ರೀಧರ್, ಸಿದ್ದಾಚಾರಿ, ಮಂಜುಸ್ವಾಮಿ ಹಂಗ್ರಾಪುರ ಸೇರಿದಂತೆ ಇತರರು ಇದ್ದರು.