ಜಿಲ್ಲೆ

ನಮ್ಮವ್ವ ಕೃಷ್ಣೆ ನಮ್ಮ ಪಾಲಿನ ದೇವತೆ

ಪವನ ದೇಶಪಾಂಡೆ ಕೊಡೇಕಲ್
ರೈತರ ಜೀವನಾಡಿಯಾಗಿರುವ ಬಸವಸಾಗರ ಜಲಾಶಯ ರೈತರಿಗಷ್ಟೇ ಅಲ್ಲ ಬೆಸ್ತರ (ಮೀನುಗಾರರ) ಪಾಲಿಗೂ ಅನ್ನ ನೀಡುವ ತಾಯಿಯಾಗಿದ್ದರಿಂದ ನಮ್ಮವ್ವ ಕೃಷ್ಣೆ ನಮ್ಮ ಪಾಲಿನ ದೇವತೆ ಎಂದು ಪೂಜಿಸುತ್ತಾರೆ.

ಗಂಗಾಮಾತೆಯನ್ನ ಪೂಜ್ಯ ಭಾವನೆಯಿಂದ ನೋಡುವ ಇವರು, ನದಿಯಲ್ಲಿ ಸಿಗುವ ಮೀನು ಹಿಡಿದು ಅವುಗಳನ್ನು ಮಾರಾಟ ಮಾಡಿ ತಮ್ಮ ತುತ್ತು ಹೊತ್ತಿನ ಚೀಲ ತುಂಬಿಸಿಕೊಳ್ಳುವುದು ಅವರ ನಿತ್ಯದ ಕಾಯಕವಾಗಿದೆ. 15 ದಿನಗಳ ಹಿಂದೆ ಬಸವಸಾಗರ ಜಲಾಶಯದ ಗೇಟ್ಗಳ ಮೂಲಕ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಮೀನು ಹಿಡಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ನಿಷೇಧ ವಿಧಿಸಿತ್ತು.

ಇದರಿಂದ ಕೆಲ ದಿನಗಳ ಕಾಲ ಕಂಗಾಲಾಗಿ ಜೀವನ ನಡೆಸಲು ಸಂಕಷ್ಟ ಎದುರಿಸುತ್ತಿದ್ದ ಮಿನುಗಾರರಿಗೆ ಈಗ ಪ್ರವಾಹ ಇಳಿಮುಖವಾಗಿದ್ದರಿಂದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಗುರುವಾರ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿರುವ ಕಾರಣ ಜಲಾಶಯದ 3 ಗೇಟ್ ಮೂಲಕ 27 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ 15 ದಿನಗಳಿಂದ ತುಂಬಿ ಹರಿಯುತ್ತಿದ್ದ ಕೃಷ್ಣೆ ಮತ್ತೆ ಶಾಂತಳಾಗುತ್ತಿರುವುದರಿಂದ ಮೀನುಗಾರರಲ್ಲಿ ಹೊಸ ಉತ್ಸಾಹ ಚಿಗುರೊಡೆದಿದೆ.

ಸಮೀಪದ ಕೋರಿ ಸಂಗಯ್ಯ, ಛಾಯಾ ಭಗವತಿ ದೇವಸ್ಥಾನ ಬಳಿ ಹರಿಯುವ ಕೃಷ್ಣಾ ನದಿಯಲ್ಲಿ ಮೀನುಗಾರರು ವಿವಿಧ ಪ್ರಕಾರದ ಬಲೆ ಬೀಸುವ ಮೂಲಕ ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಳೆದೆರಡು ದಿನದಿಂದ ತಮ್ಮ ಕುಲ ಕಸುಬನ್ನು ಆರಂಭಿಸಿದ ಮೀನುಗಾರರು ದೊಡ್ಡ ದೊಡ್ಡ ಬಲೆಗಳನ್ನು ಸಿದ್ಧಪಡಿಸಿಕೊಂಡು ನದಿ ತೀರಕ್ಕೆ ತೆರಳಿ ಮೀನಿಗಾಗಿ ಬಲೆ ಬೀಳಿಸುತ್ತಿದ್ದಾರೆ. ಏನ್ನಿಲ್ಲ ಎಂದರು ದಿನಕ್ಕೆ 50 ಕೆಜಿಯಷ್ಟು ವಿವಿಧ ತಳಿಯ ಮೀನು ಬಲೆಗೆ ಕೆಡಹುತ್ತಾರೆ.

ಹೊಸ ನೀರಿನೊಂದಿಗೆ ಹೊಸ ಹೊಸ ಮೀನು ಹರಿದು ಬರುತ್ತಿದ್ದು ಇದರಿಂದ ಮೀನು ವ್ಯಾಪಾರ ಕೂಡ ಜೋರಾಗಿದ್ದು, ಬಲೆ ಹಾಕುವ ಸ್ಥಳಕ್ಕೆ ಮೀನು ಪ್ರಿಯರು ತೆರಳಿ ತಾಜಾ ಮೀನುಗಳ ಖರೀದಿ ಮಾಡುತ್ತಿದ್ದಾರೆ. ಹಾವು ಮೀನು, ಕಾಟ್ಲಾ ಮೀನು, ರವೂ, ಕಾಗಿ ಮೀನು ಮತ್ತು ಬಾಳಿ ಮೀನು ಸೇರಿ ವಿವಿಧ ತಳಿಯ ಮೀನು ನದಿಯಲ್ಲಿ ಸಿಗುತ್ತಿದ್ದು ಅವುಗಳ ಪ್ರಬೇಧ ಮತ್ತು ಗಾತ್ರಕ್ಕನುಗುಣವಾಗಿ ಬೆಲೆ ನಿಗದಿ ಮಾಡಲಾಗುತ್ತದೆ. ಅದರಲ್ಲೂ ಹಾವು ಮೀನಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.