ಗೃಹ ಸಚಿವ ಡಾ.ಪರಮೇಶ್ವರ 
ಜಿಲ್ಲೆ

ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಬಳಿಯೂ ದುಡ್ಡಿಲ್ಲ

ಬಾಗಲಕೋಟೆ: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಸ್ವಪಕ್ಷದ ಶಾಸಕರೇ ಆಗಾಗ ತಮ್ಮ ಅಸಮಧಾನ ಹೊರಹಾಕುತ್ತಲೇ ಇದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ರಾಗ್ಯ ಗೃಹ ಸಚಿವ ಡಾ.ಪರಮೇಶ್ವರ ಅವರು ಬಾದಾಮಿ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಮ್ಮ (ಸರ್ಕಾರ) ಬಳಿ ದುಡ್ಡು ಇಲ್ಲ ಎಂದು ಬಹಿರಂಗವಾಗಿಯೇ ಹೇಳಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಬಾದಾಮಿ ಪಟ್ಟಣದಲ್ಲಿ ಸೋಮವಾರ ಅಗ್ನಿಶಾಮಕ ಠಾಣೆ ಉದ್ಘಾಟನೆ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಪರಮೇಶ್ವರ ಅವರು, ಬಾದಾಮಿ ಅಭಿವೃದ್ಧಿ ವಿಚಾರವಾಗಿ ಪ್ರಸ್ತಾಪಿಸಿದರು. ನಮ್ಮ ಹತ್ತಿರ(ಸರ್ಕಾರ) ದುಡ್ಡಿಲ್ಲ, ಸಿದ್ದರಾಮಯ್ಯ ಅವರ ಹತ್ತಿರವೂ ದುಡ್ಡಿಲ್ಲ ಆಯ್ತಾ ಎಂದು ನೇರವಾಗಿಯೇ ಹೇಳಿಕೊಂಡರು.

ಈಗಾಗಲೇ ನಾವು ನಿಮಗೆಲ್ಲ ಕೊಟ್ಟು ಬಿಟ್ಟಿದ್ದೇವೆ. ಅಕ್ಕಿ, ಬೇಳೆ, ಎಣ್ಣೆ ಎಲ್ಲವನ್ನು ಸಹ. ಎಣ್ಣೆನೂ(ಮದ್ಯ)ಕೊಟ್ಟಿದ್ದೇವೆ. ಇಲ್ಲೆ ಇದ್ದಾರಲ್ಲ ಎಂದು ವೇದಿಕೆ ಮೇಲೆ ಇದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕಡೆಗೆ ಕೈ ಮಾಡಿ ತೋರಿಸಿ ಹಾಸ್ಯ ಮಾಡಿದರು.

ಬಾದಾಮಿ ಕ್ಷೇತ್ರ ಅಭಿವೃದ್ಧಿ ಆಗಬೇಕು. ಇದಕ್ಕೆ ಒಂದು ದೊಡ್ಡ ಯೋಜನೆ ಸಿದ್ದಪಡಿಸಿ. ಅದು ಸಾವಿರ ಕೋಟಿ ರೂ. ಯೋಜನೆ ಮಾಡಿ. ಸಾವಿರ ಕೋಟಿ ಎಂದ ಕೂಡಲೇ ನೀನು(ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ) ಹೆದರುತ್ತಿಯಾ? ಭೀಮಸೇನನಿಗೆ ಏನಾಗಿದೆ ಎಂದರೆ ಏನಪ್ಪ ಇವರು ಸಾವಿರ, ಗೀವರಾ ಎಂದರೆ ಏನಿದು ಅಂತ. ಸಾವಿರ ಕೋಟಿ ರೂ. ಪ್ರಾಜಕ್ಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ಅದರಿಂದ ಬಾದಾಮಿ ರಕ್ಷಣೆ ಮಾಡಿದಂತೆ ಆಗುತ್ತದೆ. ಇದರಿಂದ ಬಾದಾಮಿಯನ್ನು ಇನ್ನಷ್ಟು ಸುಂದರ ಮಾಡಲು ಆಗುತ್ತದೆ ಎಂದು ಪರಮೇಶ್ವರ ಅವರು ತಮ್ಮ ಸರ್ಕಾರದಲ್ಲಿ ದುಡ್ಡಿಲ್ಲ, ಕೇಂದ್ರ ಸರ್ಕಾರಕ್ಕೆ ಅನುದಾನ ಕೇಳಿ ಎಂದರು.

ಬಾದಾಮಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಕ್ಷೇತ್ರ. ೨೦೨೮ ರಿಂದ ೨೦೨೩ರ ಅವಽಗೆ ಬಾದಾಮಿ ಶಾಸಕರಾಗಿ, ವಿಪಕ್ಷ ನಾಯಕರಾಗಿದ್ದರು. ಈ ವೇಳೆ ರಾಜ್ಯದಲ್ಲಿ ೨೦೨೩ರಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಬಾದಾಮಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸಿ, ಇಲ್ಲಿನ ಮತದಾರರ ಋಣ ತೀರಿಸುವುದಾಗಿ ೫ ವರ್ಷ ಹೇಳುತ್ತಲೇ ಬಂದಿದ್ದರು. ಅದರಂತೆ ಕಾಂಗ್ರೆಸ್ ಪಕ್ಷಕ್ಕೆ ಅಽಕಾರ ಬಂದು, ಸ್ವತಃ ಸಿದ್ದರಾಮಯ್ಯ ಅವರು ಸಿಎಂ ಕೂಡ ಆದರು. ಆದರೆ, ಬಾದಾಮಿ ಕ್ಷೇತ್ರಕ್ಕೆ ಮಾತ್ರ ಅಭಿವೃದ್ಧಿಯ ಗಾಳಿ ಸೋಂಕಲೇ ಇಲ್ಲ. ಇದೀಗ ಸಿದ್ದರಾಮಯ್ಯ ಸಂಪುಟ ಸದಸ್ಯ ಡಾ.ಜಿ.ಪರಮೇಶ್ವರ ಅವರು ಅಭಿವೃದ್ಧಿ ಕೆಲಸಕ್ಕೆ ತಮ್ಮ ಕಡೆಗೆ ದುಡ್ಡಿಲ್ಲ, ಸಿದ್ದರಾಮಯ್ಯ ಕಡೆಗೂ ದುಡ್ಡಿಲ್ಲ ಎಂದು ಸರ್ಕಾರದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟಿದ್ದಾರೆ. ಪರಮೇಶ್ವರ ಆಡಿದ ಈ ಮಾತಿನ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.