ಬೆಂಗಳೂರು: ಪ್ರಶಸ್ತಿ ಪ್ರದಾನ ಮಾಡುವಾಗ ನಮ್ಮವರು, ಸ್ನೇಹಿತರು ಎಂದಿಲ್ಲ. ಅವರು ಮಾಡಿದ ಕೆಲಸವನ್ನು ನೋಡಿ ಕೊಡಬೇಕು. ಈ ವಿಷಯದಲ್ಲಿ ಸರ್ಕಾರವೂ ತಾರತಮ್ಯ ಮಾಡುತ್ತಿದೆ. ನಮ್ಮಂತಹವರು ಬಹಿಷ್ಕೃತರ ಪಟ್ಟಿಯಲ್ಲಿದ್ದು, ಸರ್ಕಾರ ಖಂಡಿತ ಪ್ರಶಸ್ತಿ ಕೊಡುವುದಿಲ್ಲ ಎಂದು ಹಿರಿಯ ಕವಿ, ಗೌರಿ ಸುಂದರ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಬಿ.ಆರ್. ಲಕ್ಷ್ಮಣ್ ರಾವ್ ಹೇಳಿದ್ದಾರೆ. ಸುಂದರ ಪ್ರಕಾಶನ ವತಿಯಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಟ್ ವರ್ಲ್ಡ್ ಕಲ್ಚರ್ ಬಿ.ಪಿ. ವಾಡಿಯ ಸಭಾಂಗಣಲ್ಲಿ ಭಾನುವಾರ ಆಯೋಜಿಸಿದ್ದ "7ನೇ ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ' ಕಾರ್ಯಾಕ್ರಮದಲ್ಲಿ ಮಾತನಾಡಿದರು. ಕಲಾವಿದರಿಗೆ ಅವರ ಕಲೆಯೇ ಜೀವನೋತ್ಸಾಹವನ್ನು ನೀಡುತ್ತದೆ. ಅದಕ್ಕೆ ಗೌರಿ ಸುಂದರ್ ಅವರ ಜೀವನವೇ ಉದಾಹರಣೆ. ಯಾಕೆಂದರೆ, ಅವರು ತಮ್ಮ ಜೀವನದ ಉದ್ದಕ್ಕೂ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಹಾಗೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ, ಸದಾ ಸಂತೋಷ, ಹುರುಪು ಹಾಗೂ ಉತ್ಸಾಹದಿಂದ ಬದುಕು ಸಾಗಿಸಿದ್ದರು ಎಂದರು. ನಟಿ, ನಿರ್ದೇಶಕಿ ಡಾ.ಎಸ್.ವಿ. ಸುಷ್ಮಾ ಅವರಿಗೆ "ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಲೇಖಕ ಮಂ.ಆ. ವೆಂಕಟೇಶ್ ರಚನೆಯ "ಕರ್ನಾಟಕ ರಾಜ್ಯ ರಮಾರಮಣರು' ಪುಸ್ತಕ ಬಿಡುಗಡೆ ಮಾಡಲಾಯಿತು. ವಿಜಯನಗರ ಬಿಂಬ ಮತ್ತು ಪಿಇಎಸ್ ವಿಶ್ವವಿದ್ಯಾಯದ ಶಿಷ್ಯವೃಂದದಿಂದ "ರಂಗ ಕವನ' ಪ್ರಾಯೋಗಿಕ ರಂಗ ಪ್ರಸ್ತುತಿ ನಡೆಯಿತು. ರಂಗಕರ್ಮಿ ಗುಂಡಣ್ಣ, ಸಾಹಿತಿ ಎಚ್. ಗೋಪಾಲಕೃಷ್ಣ, ಇಂದಿರಾ ಸುಂದರ್ ಮತ್ತಿತರರು ಇದ್ದರು.
ರಂಗಭೂಮಿಗೆ ಪ್ರೋತ್ಸಾಹವಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಬೆಂಗಳೂರು ತುಂಬ ದೊಡ್ಡದಾಗಿ ಬೆಳೆದಿದೆ. ವಿಪುಲವಾದ ಅವಕಾಶಗಳಿವೆ, ಅವನ್ನು ಬಳಸಿಕೊಳ್ಳಬೇಕು ಅಷ್ಟೇ. ಕಲಾವಿದನಾದವನು ರಂಗಭೂಮಿಯನ್ನು ವೃತ್ತಿಪರ ಕ್ಷೇತ್ರವಾಗಿ ಆಯ್ಕೆ ಮಾಡಿ ಬೆಳೆಯುವಂತಾಗಬೇಕು. ಅದಕ್ಕಾಗಿ ನಮ್ಮ ತಂಡ ನಿರಂತರ ಶ್ರಮಿಸುತ್ತಿದೆ. ವೃತ್ತಿಪರವಾಗಿ ಬೆಳೆಯಬೇಕೆಂದಿದ್ದರೆ ಶಿಕ್ಷಣ ಸಂಸ್ಥೆಗಳ ಸಹಕಾರ ಮುಖ್ಯವಾಗುತ್ತದೆ. > ಡಾ.ಎಸ್.ವಿ. ಸುಷ್ಮಾ, ನಟಿ, ನಿರ್ದೇಶಕಿ