ಜಿಲ್ಲೆ

ನಮ್ಮ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಏಕೆ ಬಳಸಬೇಕು: ಮಾಜಿ ಶಾಸಕ ಎನ್. ಮಹೇಶ್ ಪ್ರಶ್ನೆ

 ಹಾಸನ:  ಸದೃಢ ಯೋಜನೆಗಳನ್ನು ಮೂಲೆಗುಂಪು ಮಾಡಿ ಆ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ವಿನಿಯೋಗಿಸಲಾಗುತ್ತಿದೆ. ಈ ಸಂಬಂಧ ಎಸ್‌ಸಿ ಮೋರ್ಚಾದ ಮೂಲಕ ಜನಾಭಿಪ್ರಾಯ ಮೂಡಿಸಲು ಎಲ್ಲಾ ಕಡೆ ಸಭೆ ಮಾಡುತ್ತಿರುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾದ ಮೈಸೂರು ವಿಭಾಗದ ಸಂಘಟಕ ಕೊಳ್ಳೇಗಾಲದ ಎನ್. ಮಹೇಶ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಎಸ್‌ಸಿ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ನಮಗೆ ಮೋಸ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಬಣ್ಣ ಬಯಲು ಮಾಡಲು ಈ ಸಭೆ ಮಾಡಲಾಗಿದೆ. ಎಸ್‌ಇಪಿ ಟಿಎಸ್‌ಪಿ ಯೋಜನೆಯ 11, 144 ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದೆ ಎಂದು ದೂರಿದರು.

ಗ್ಯಾರಂಟಿ ಯೋಜನೆ ಎಂದರೆ ಎಲ್ಲಾ ಬಡವರಿಗೆ ಕೊಡುವ ಸಾಮಾನ್ಯ ಯೋಜನೆ. ಎಸ್‌ಸಿ, ಎಸ್‌ಟಿಗಳ ಶಾಶ್ವತ ಯೋಜನೆಗೆ ಕೊಡಬೇಕಾದ ಎಸ್‌ಇಪಿ ಟಿಎಸ್‌ಪಿ ಹಣ ಏಕೆ ಬಳಸಬೇಕು. ಕೂಡಲೇ ಈ ಹಣವನ್ನು ಗ್ಯಾರಂಟಿ ಯೋಜನೆಯಿಂದ ನಿಲ್ಲಿಸಿ ಎಂದು ಸರಕಾರಕ್ಕೆ ಒತ್ತಾಯ ಮಾಡಬೇಕಾಗಿದೆ. ನಮ್ಮ ಹಣ ಹೇಗೆ ದುರುಪಯೋಗವಾಗುತ್ತಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಭೆ ನಡೆಲಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ ಸಚಿವರು ಸೇರಿ ಎಸ್‌ಇಪಿ ಟಿಎಸ್‌ಪಿ ಹಣವನ್ನು ಎಸ್‌ಸಿ ಫಲಾನುಭವಿಗಳಿಗೆ ಕೊಡುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಗೃಹಲಕ್ಷ್ಮೀ ಯೋಜನೆಯಲ್ಲಿ ಸಾಮಾನ್ಯ ಫಲಾನುಭವಿಗಳಿಗೆ 2 ಸಾವಿರ ರೂ. ಕೊಡಲಾಗುತ್ತಿದೆ. ಎಸ್‌ಸಿಗಳಿಗೆ 2 ಸಾವಿರ ರೂ. ಸೇರಿಸಿ 4 ಸಾವಿರ ರೂ. ಕೊಡಿ ನೋಡೋಣ ಎಂದು ಸವಾಲು ಹಾಕಿದರು.

ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಕಡಿಮೆ ಅನುದಾನ ಕೊಟ್ಟು ದೊಡ್ಡ ಪ್ರಮಾಣದ ಹಣವನ್ನು ಗ್ಯಾರಂಟಿಗೆ ಕೊಡಲಾಗುತ್ತಿದೆ. ಇನ್ನು ಸಮೃದ್ಧಿ ಯೋಜನೆಯನ್ನು ನಿಲ್ಲಿಸಿದ್ದಾರೆ. ಐರಾವತ ಯೋಜನೆ ಸ್ಥಗಿತ ಮಾಡಿದ್ದು, ಸ್ವಯಂ ಉದ್ಯೋಗ ಯೋಜನೆ ಸೇರಿದಂತೆ ಅನೇಕ ಯೋಜನೆಗೆ ಕೊಡಬೇಕಾದ ಹಣವನ್ನೆಲ್ಲಾ ಗ್ಯಾರಂಟಿಗಳಿಗೆ ಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತವಾಗಿ ಪರಿಹಾರವಾಗುವಂತಹ ಆರ್ಥಿಕವಾಗಿ ಸಧೃಢವಾಗಬಹುದಾಂತಹ ಯೋಜನೆಗಳ ಕತ್ತು ಹಿಸುಕಿ ತಾತ್ಕಾಲಿಕ ಯೋಜನೆಗಳಿಗೆ ನಮ್ಮ ದುಡ್ಡು ಕೊಡುತ್ತಿರುವುದು ಒಳ್ಳೆಯ ಕ್ರಮವಲ್ಲ. ಈ ಬಗ್ಗೆಯೇ ಜನಾಭ್ರಿಪಾಯ ಮೂಡಿಸಲು ಎಸ್.ಸಿ. ಮೋರ್ಚಾ ಮೂಲಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಎಸ್.ಡಿ. ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಹಿತ್ ಜಂಬರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಪರಮಾನಂದ್, ಕಾರ್ಯಕಾರಿಣಿ ಸದಸ್ಯ ಮಹೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪ್ರಸನ್ನ, ಮಾಜಿ ಜಿಲ್ಲಾಧ್ಯಕ್ಷ ಪರ್ವತಯ್ಯ, ಹೊಳೆನರಸೀಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಇತರರು ಉಪಸ್ಥಿತರಿದ್ದರು.