ಜಿಲ್ಲೆ

ನಮ್ಮ ಸೇನೆ ತಿಳಿಯುವ ಅವಕಾಶ, ಯುವ ಜನೋತ್ಸವದ ವಿಶೇಷ ಆಕರ್ಷಣೆ

ಧಾರವಾಡ: ದೇಶದ ಯುವ ಶಕ್ತಿಯೇ ಸೇನೆಯ ಬಲ. ಹಾಗಾಗಿ, ಯುವಕರಿಗೆ ನಮ್ಮ ಸೇನೆಯ ಬಗ್ಗೆ ತಿಳಿವಳಿಕೆ ನೀಡುವ ಸಲುವಾಗಿ ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಪ್ರದರ್ಶಿನಿಯಲ್ಲಿ ಆರಂಭಿಸಲಾದ ಮಳಿಗೆಯು ವಿಶೇಷ ಗಮನ ಸೆಳೆಯುತ್ತಿದೆ.

‘ನೌ ಯುವರ್ ಆರ್ವಿು’ ಎಂಬ ವಿಶೇಷ ಮಳಿಗೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ವೈವಿದ್ಯಮಯ ಸಲಕರಣೆಗಳು ನೋಡುಗರಿಗೆ ಮೋಡಿ ಮಾಡುತ್ತಿವೆ. ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ಸೇನಾ ಪಡೆಗಳು ಬಳಸುವ ಅತ್ಯುನ್ನತ ಶಸ್ತ್ರಾಸ್ತ್ರಗಳನ್ನು ಇಲ್ಲಿ ಕಾಣಬಹುದು.

ದೇಶದ ವಿವಿಧ ಪಡೆಗಳ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಮ್ಮೆ ಮೂಡಿಸುವ ಉದ್ದೇಶದಿಂದ ಮಳಿಗೆಗಳನ್ನು ತೆರೆಯಲಾಗಿದೆ.

ಎರಡು ಭಾಗದಲ್ಲಿರುವ ಮಳಿಗೆಗಳಲ್ಲಿ ಸೇನೆಯಲ್ಲಿ ಬಳಸುವ ಆಯುಧಗಳ ಪ್ರದರ್ಶನ ಮತ್ತು ಅಗ್ನಿವೀರ ಯೋಜನೆಯ ಪ್ರವೇಶದ ಕುರಿತು ಮಾಹಿತಿ ನೀಡಲಾಗಿದೆ.

ಆಯುಧಗಳ ಪ್ರದರ್ಶನ ವಿಭಾಗದಲ್ಲಿ ಭಾರತೀಯ ಸೇನೆಯ ಅತ್ಯಾಧುನಿಕ ಆಯುಧಗಳನ್ನು ಇಡಲಾಗಿದೆ. ವಿಶೇಷವಾಗಿ 7.62 ಎಂ.ಎಂ. ಸಿಂಗಲ್ ಅಸಾಲ್ಟ್ ರೈಫಲ್, 7.62 ಎಂ.ಎಂ. ಎಲ್​ಎಂಜಿ ಎಕೆ-47, ಸ್ಕೈಪರ್ ಡಿಎಸ್​ಆರ್, ಎಂಎಂಜಿ, ರಾಕೆಟ್ ಲಾಂಚರ್​ಗಳನ್ನು ಮತ್ತು ಅದರ ವೈಶಿಷ್ಟ್ಯಗಳನ್ನು ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

ರಾತ್ರಿ ಮತ್ತು ಹಗಲು ಎನ್ನದೇ ಸೇನಾ ಪಡೆಗಳು ಬಳಸುವ ಕಣ್ಗಾವಲು ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ದೇಶ ರಕ್ಷಣೆಯಲ್ಲಿ ಕಣ್ಗಾವಲು ವ್ಯವಸ್ಥೆ ಅತ್ಯಂತ ಮಹತ್ವ ಪಡೆಯುತ್ತದೆ. ಇದರಲ್ಲಿನ ನಾವೀನ್ಯತೆಗಳ ಬಗ್ಗೆ ಮಾಹಿತಿ ಪಡೆಯಬಹುದು.

ಸೇನಾ ಪಡೆಗಳಿಗೆ ಸೇರ್ಪಡೆಯಾಗಲು ಅಗ್ನಿವೀರ್ ಅತ್ಯಂತ ಮಹತ್ವದ ಯೋಜನೆಯಾಗಿದೆ. ಇದರ ರೂಪುರೇಷೆಗಳ ಕುರಿತು ಮಳಿಗೆಯಲ್ಲಿ ಸಮಗ್ರ ಮಾಹಿತಿ ಇದೆ. ಅಗ್ನಿವೀರ್ ಯೋಜನೆ ಕುರಿತು ಹರಡಿರುವ ತಪ್ಪು ಗ್ರಹಿಕೆ ತೊಡೆದು ಹಾಕುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ.

18- 21 ವರ್ಷದ ಯುವಕರು ಹೆಚ್ಚು ಆಸಕ್ತಿಯಿಂದ ಇದನ್ನು ನೋಡುತ್ತಿದ್ದಾರೆ. ನಾಲ್ಕು ವರ್ಷಗಳ ಸೇವೆಯ ನಂತರ ವಾಪಸ್ ಆಗುವ ಯುವಕರಿಗೆ ಇರುವ ಉದ್ಯೋಗಾವಕಾಶಗಳು, ಅಗ್ನಿವೀರ್ ಯೋಜನೆಯಿಂದ ದೇಶ ಮತ್ತು ವ್ಯಕ್ತಿಗತವಾಗಿ ಆಗುವ ಒಟ್ಟಾರೆ ಲಾಭಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.