ಚನ್ನರಾಯಪಟ್ಟಣ: ಚನ್ನರಾಯಾಪಟ್ಟಣದಲ್ಲಿ ಕೆಐಎಡಿಬಿ ವಿರುದ್ಧ ರೈತರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ 25ನೇ ದಿನವಾದ ಗುರುವಾರ ಜಮೀನಿನಲ್ಲಿ ನಮ್ಮ ಭೂಮಿ, ನಮ್ಮ ಹಕ್ಕು ಎಂಬ ೋಷಣೆಯ ಹಸಿರು ಬಾವುಟಗಳನ್ನು ನೆಟ್ಟು ಭೂಮಿ ಉಳಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು.
ಚಿಂತಕ ಸಾ.ರಘುನಾಥ್ ಮಾತನಾಡಿ, ನಮ್ಮ ಭೂಮಿಯನ್ನು ಪೂರ್ವಿಕರ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದು, ಈ ಜಮೀನನ್ನು ಮುಂದಿನ ಮಕ್ಕಳಿಗೂ ಉಳಿಸಬೇಕು. ಹಣ್ಣು, ತರಕಾರಿ, ಸೊಪ್ಪು, ಹಾಲು ಸೇರಿ ದಿನಬಳಕೆ ಸಾಮಗ್ರಿಗಳನ್ನು ಸರಬರಾಜು ಈ ಭಾಗದಿಂದ ಸರಬರಾಜು ಮಾಡಲಾಗುತ್ತಿದೆ. ಇಂತಹ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಮ ಸರಿಯಲ್ಲ ಎಂದರು.
ಭೂಮಿಗಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧರಾಗಿರಬೇಕು. ಆತ್ಮವಿಶ್ವಾಸದಿಂದ ಮಹಿಳೆಯರೂ ಮುನ್ನಡೆಯಬೇಕು. ಜಮೀನಿನಲ್ಲಿ ಎಲ್ಲ ರೈತರು ಹಸಿರು ಬಾವುಟ ಹಾರಿಸಬೇಕು. ಈ ಹೋರಾಟ ದಿನೇ ದಿನೆ ಎಲ್ಲ ರೈತರನ್ನು ವ್ಯಾಪಿಸುತ್ತಿದೆ. ಸರ್ಕಾರದ ತೀರ್ಮಾನ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದರು.
ರೈತ ಮುಖಂಡ ಮಾರೇಗೌಡ ಮಾತನಾಡಿ, ಸರ್ಕಾರ, ರೈತರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಅನ್ನದಾರು 25 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.
ಹೋರಾಟಗಾರರಾದ ರಮೇಶ್‌ದಾಸ್, ಮೋಹನ್, ವೆಂಕಟರಮಣಪ್ಪ, ಪುನೀತ್, ಲೋಕೇಶ್, ರಘು, ದೇವರಾಜ್, ಅಂಬರೀಶ್ ಮುಂತಾದವರು ಹಾಜರಿದ್ದರು.