ಜಿಲ್ಲೆ

ನಮ್ಮ ಜಮೀನು ಬಿಡಿ ಇಲ್ಲವೇ ವಿಷ ಕೊಡಿ

ಅಶೋಕ್ ಕುಮಾರ್ ಎನ್

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾರಿ ಯೋಜನೆ ಭೂಸಂತ್ರಸ್ಥ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ರೈತರು ಸೋಮವಾರ ಪಟ್ಟಣದಲ್ಲಿರುವ ಭೂಸ್ವಾಧೀನಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪರಿಹಾರದ ಹಣ ಬೇಡ ನಮ್ಮ ಜಮೀನು ಕೊಡಿ, ಇಲ್ಲದಿದ್ದರೆ ವಿಷ ಕೊಡಿ ಎಂದು ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಸಂಗನಗೌಡ ಮಾತನಾಡಿ, ನಮ್ಮ ಜಮೀನಿಗೆ ನೀರು ಬರುತ್ತದೆ ಎಂದು ನಮ್ಮ ಅನುಮತಿ ಇಲ್ಲದೆ 2013ರಲ್ಲಿ ಭೂಸ್ವಾಧೀನ ಮಾಡಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಕಾಲುವೆಗಳಲ್ಲಿ ಇಂದಿಗೂ ನೀರು ಹರಿಯುತ್ತಿಲ್ಲ. ಪರಿಹಾರ ನೀಡಿ ಎಂದು ಕಳೆದ 15 ವರ್ಷಗಳಿಂದ ಕಚೇರಿಗೆ ತಿರುಗುತ್ತಿದ್ದೇವೆ. ನಮ್ಮ ತಾಲೂಕಿನ ಇತರ ಗ್ರಾಮಗಳ ರೈತರಿಗೆ ಪರಿಹಾರ ಬಂದಿದ್ದು ನಮಗೆ ಯಾಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ವಿರೂಪಾಕ್ಷಪ್ಪ ಅಲ್ಲಿಪುರ ಮಾತನಾಡಿ, ನಮ್ಮ ಜಮೀನಿನಲ್ಲಿ ನಿರ್ಮಿಸಿರುವ ಕಾಲುವೆಗಳ ಕಾಮಗಾರಿ ಕಳಪೆಯಾಗಿದೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಜಾಕ್‌ವಾಲ್‌ನಿಂದ ಒಂದು ಕಿ.ಮೀ ದೂರವೂ ನೀರು ಹರಿಯುತ್ತಿಲ್ಲ. ರೈತರ ಬಳಿ ಲಂಚ ಕೇಳುತ್ತಿದ್ದು, ನಾವು ಎಲ್ಲಿಂದ ಹಣ ತಂದು ಕೊಡಬೇಕು ಹೇಳಿ ಎಂದು ಪ್ರಶ್ನಿಸಿದರು.

ಇಂಜಿನಿಯರ್ ರಮೇಶ್ ಪ್ರತಿಭಟನಾನಿರತರ ಮನವೊಲಿಕೆಗೆ ಜಗ್ಗದ ರೈತರು ಕಚೇರಿಯಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದರು. ತಹಸೀಲ್ದಾರ್ ಸಂತೋಷ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರ ಬಳಿ ಮಾತನಾಡಿ, ಕಾಲಾವಕಾಶ ಕೇಳಿದರು. ರೈತರಾದ ಗಂಗಾಧರ, ಮಂಜುನಾಥ ಆರ್., ಬಸವರಾಜ, ಕೆ.ಮಂಜುನಾಥ, ನಿಂಗನಗೌಡ, ರಾಜು, ಮಲ್ಲಪ್ಪ, ಪರಮೇಶಪ್ಪ, ಹನುಮಂತಪ್ಪ, ರಾಮಣ್ಣ, ಪಕ್ಕೀರಪ್ಪ, ಬಸಪ್ಪ, ಹನುಮರೆಡ್ಡಿ, ಪ್ರಕಾಶ್ ಲಕ್ಷ್ಮಣ ಇತರರಿದ್ದರು.