ಬಾಗಲಕೋಟೆ ನಗರದ ಪ್ರೆಸ್ ಕ್ಲಬ್ ನಲ್ಲಿ ಹಲಕುರ್ಕಿ ಗ್ರಾಮದ ಪಾರ್ವತೆವ್ವ ಮಾದರ, ಅಂಬಕ್ಕ ನಾಯ್ಕರ, ನೀಲವ್ವ ನಾಯ್ಕರ, ಶೇಖವ್ವ ನಾಯ್ಕರ, ಪಾರವ್ವ ಮಾದರ, ಫಕೀರವ್ವ ಮಾದರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಜಿಲ್ಲೆ

ನಮ್ಮ ಜಮೀನು ಬಿಟ್ಟು ಕೊಡಲ್ಲ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ವಿಮಾನ ನಿಲ್ದಾಣ ಮತ್ತು ಕೈಗಾರಿಕಾ ಸ್ಥಾಪನೆಗೆ ನಮ್ಮ ಜಮೀನುಗಳನ್ನು ಯಾವುದೇ ಕಾರಣಕ್ಕೂ ಕೊಡಲ್ಲ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಲು ಸಿದ್ದರಿದ್ದೇವೆ ಎಂದು ಹಲಕುರ್ಕಿ ಗ್ರಾಮದ ಮಹಿಳಾ ರೈತರು ಎಚ್ಚರಿಕೆ ನೀಡಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಲಕುರ್ಕಿ ಗ್ರಾಮದ ಪಾರ್ವತೆವ್ವ ಮಾದರ, ಅಂಬಕ್ಕ ನಾಯ್ಕರ, ನೀಲವ್ವ ನಾಯ್ಕರ, ಶೇಖವ್ವ ನಾಯ್ಕರ, ಪಾರವ್ವ ಮಾದರ, ಫಕೀರವ್ವ ಮಾದರ ಮಾತನಾಡಿದ ಅವರು, ಊರಿಗೆ ಬಂದು ನಮ್ಮನ್ನು ಕೇಳದೆ ಡಂಗುರ ಸಾರಿ ಗ್ರಾಮಸಭೆ ಮಾಡದೇ ಏಕಾಏಕಿ ಜಮೀನುಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ. ಸಚಿವ ಮುರುಗೇಶ ನಿರಾಣಿ ರೈತರ ಅಭಿಪ್ರಾಯ ಕೇಳಿ ಮುಂದಿನ ಹೆಜ್ಜೆ ಇಡಬೇಕು ಎಂದು ಆಗ್ರಹಿಸಿದರು.
ಹಲಕುರ್ಕಿ ಗ್ರಾಮದಲ್ಲಿ ಜಮೀನುಗಳು ವಂಶಪಾರಂಪರ್ಯವಾಗಿ ಬಂದಿವೆ. ಇವುಗಳನ್ನು ಹಾಗೆಯೇ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ಜಮೀನು ಬರೀ ಮಣ್ಣು ಅಲ್ಲ. ಅದರಲ್ಲಿ ನಮ್ಮ ಉಸಿರು ಇದೆ. ಜಮೀನು ಕಳೆದುಕೊಳ್ಳುವುದು ಜೀವ ಕಳೆದುಕೊಳ್ಳುವುದು ಎರಡೂ ಒಂದೆ. ಎಸ್ಸಿ,ಎಸ್ಟಿಯವರು ಈಗ ಜಮೀನು ಕಳೆದುಕೊಂಡರೆ ಮುಂದೆ ಜಮೀನು ಗಳಿಸುವುದು ಸಾಧ್ಯವಿಲ್ಲ. ಇರುವ ಜಮೀನು ಯಾವುದೇ ಕಾರಣಕ್ಕೂ ಕೈಗಾರಿಕೆಗೆ ಸ್ಥಾಪನೆಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕೆ ಸಚಿವರು ವಿಮಾನ ನಿಲ್ದಾಣ ಮತ್ತು ಕೈಗಾರಿಕೆ ಸ್ಥಾಪನೆಗೆ ಅಗತ್ಯವಿದ್ದರೆ ಬೇರೆ ಊರಿನಲ್ಲಿ ಶ್ರೀಮಂತರು ದೊಡ್ಡ ಜಮೀನ್ದಾರರು ಹೊಂದಿರುವ ಜಮೀನು ಸ್ವಾನ ಪಡಿಸಿಕೊಳ್ಳಲಿ. ಬಡ ರೈತರ ಜಮೀನು ಮೇಲೆ ಏಕೆ ಕಣ್ಣು ಹಾಕುತ್ತೀರಿ ಎಂದು ಪ್ರಶ್ನಿಸಿದರು.
ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ನಮ್ಮ ಜಮೀನುಗಳಿಗೆ ನೀರಾವರಿ ಕಲ್ಪಿಸುತ್ತೇವೆ ಅಂತ 4(1) ನೋಟಿಸ್ ಹೊರಡಿಸಿ ಈಗ ಜಮೀನು ವಿಮಾನ ನಿಲ್ದಾಣ, ಕೈಗಾರಿಕೆ ಮಾಡುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ಉದ್ಯೋಗ ಏನು ಬೇಕಾಗಿಲ್ಲ. ಅವರು ಒಳ್ಳೆಯ ರೀತಿಯಿಂದ ಕಲಿತರೆ ಎಲ್ಲಿಯಾದರೂ ಉದ್ಯೋಗ ಮಾಡಿ ಬದುಕುತ್ತಾರೆ. ನಮ್ಮ ಉಸಿರಾಗಿರುವ ಜಮೀನು ಕಸಿದುಕೊಳ್ಳುವ ಬದಲು ನೀರಾವರಿ ಮಾಡಿ ರೈತರ ಬಾಳನ್ನು ಹಸನಗೊಳಿಸಬೇಕು ಎಂದು ಆಗ್ರಹಿಸಿದರು.