ಜಿಲ್ಲೆ

ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರೇ ಇಲ್ಲ

ದಾದಿಯರೇ ಚಿಕಿತ್ಸೆ ನೀಡುವ ಪರಿಸ್ಥಿತಿ, ಆಸ್ಪತ್ರೆ ಹುಡುಕುವುದೇ ತಲೆನೋವು

ಜಿ.ಕೆ.ಸುಗ್ಗರಾಜು ನೆಲಮಂಗಲ
ದಿನಗೂಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಿ, ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಸರ್ಕಾರ ಆರಂಭಿಸಿರುವ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯರಿಲ್ಲದೆ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಯುತ್ತಿದೆ.
ನಗರದಲ್ಲಿ 2 ನಮ್ಮ ಕ್ಲಿನಿಕ್‌ಗಳು ಇದ್ದು, ಹೊನ್ನಗಂಗಯ್ಯನಪಾಳ್ಯದ ಟೀಚರ್ಸ್‌ ಬಡಾವಣೆಯಲ್ಲಿ 2022ರ ಡಿ.14ರಂದು ಕ್ಲಿನಿಕ್ ಸ್ಥಾಪಿಸಿದ್ದು, ಈವರೆಗೆ ವೈದ್ಯರು, ಸಿಬ್ಬಂದಿ ಹಾಗೂ ಪ್ರಯೋಗಾಲಯದ ಸಿಬ್ಬಂದಿ ನೇಮಕ ಮಾಡಿಲ್ಲ. ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು, ನಿತ್ಯ ಕ್ಲಿನಿಕ್‌ಗೆ ಬರುವ ರೋಗಿಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ವೈದ್ಯರಿಲ್ಲದ ಕಾರಣ ಸಣ್ಣಪುಟ್ಟ ಕಾಯಿಲೆಗಳಿಗೆ ದಾದಿಯರೇ ಚಿಕಿತ್ಸೆ ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅನಿವಾರ್ಯವಾಗಿ ಖಾಸಗಿ ಕ್ಲಿನಿಕ್ ಅಥವಾ ಇತರ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದೆ. ಕೆಲವೊಮ್ಮೆ ಚಿಕಿತ್ಸೆ ಕೊಡದೆ ಕೇವಲ ಮಾತ್ರೆ ಕೊಟ್ಟು ಕಳಿಸುತ್ತಾರೆ ಎನ್ನಲಾಗುತ್ತಿದೆ.
ಬಾಡಿಗೆ ಮನೆಯಲ್ಲಿ ಕಾರ್ಯಾಚರಣೆ: ನಗರಸಭೆ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಎರಡು ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳ ವಿಳಾಸವಿದ್ದು, ಒಂದು ಕ್ಲಿನಿಕ್ ಸರ್ಕಾರಿ ಕಟ್ಟಡ ಹಾಗೂ ಮತ್ತೊಂದು ಕ್ಲಿನಿಕ್‌ಅನ್ನು ಬಾಡಿಗೆ ಮನೆಯಲ್ಲಿ ನಿರ್ಮಿಸಿರುವುದರಿಂದ ಸೂಕ್ತ ಸೂಚನಾ ಫಲಕವಿಲ್ಲದೇ ಹೊಸದಾಗಿ ಬಂದವರಿಗೆ ಕ್ಲಿನಿಕ್ ಹುಡುಕಾಡುವುದೇ ದೊಡ್ಡ ತಲೆನೋವಾಗಿದೆ.

ವೈದ್ಯರನ್ನು ನಿಯೋಜಿಸಿ: ಒಂದು ಕ್ಲಿನಿಕ್‌ಗೆ ಒಬ್ಬರೇ ವೈದ್ಯಾಧಿಕಾರಿ ನಿಯೋಜನೆ ಮಾಡಿದ್ದು, ಅವರು ರಜೆ ಹೋದಾಗ ಸಮಸ್ಯೆ ಆಗುತ್ತದೆ. ಕೆಲವೊಮ್ಮೆ ಸುದೀರ್ಘ ರಜೆಗೆ ಅಥವಾ ವರ್ಗಾವಣೆಯಾದಾಗ ಮತ್ತೊಬ್ಬ ವೈದ್ಯರನ್ನು ಹೆಚ್ಚುವರಿಯಾಗಿ ಜವಾಬ್ದಾರಿ ನೀಡಿ ನಿಯೋಜಿಸಬೇಕಿದೆ.
ದೊರೆಯುವ ಸೌಲಭ್ಯಗಳು: ಬಾಡಿಗೆ ಕಟ್ಟಡದಲ್ಲಿ ಕ್ಲಿನಿಕ್ ನಡೆಯುತ್ತಿದ್ದು, ವೈದ್ಯ, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಶಿಯನ್, ಡಿ.ಗ್ರೂಪ್ ನೌಕರ ಸೇರಿ ಒಂದು ಕ್ಲಿನಿಕ್‌ನಲ್ಲಿ ನಾಲ್ವರು ಸಿಬ್ಬಂದಿ ಇರಲಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಈ ಕ್ಲಿನಿಕ್‌ಗಳಲ್ಲೇ ಚಿಕಿತ್ಸೆ ಲಭ್ಯವಿರಲಿದೆ. ರಕ್ತ, ಮೂತ್ರ ಸೇರಿ ಸಾಮಾನ್ಯ ಪರೀಕ್ಷೆಗಳನ್ನು ಕ್ಲಿನಿಕ್‌ಗಳಲ್ಲೇ ಮಾಡುವ ಸೌಲಭ್ಯ ಇರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಮವಾರದಿಂದ ಶನಿವಾರದವರೆಗೂ ನಮ್ಮ ಕ್ಲಿನಿಕ್ ಬೆಳಗ್ಗೆ 9ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು ಸಂಜೆ 4.30ಕ್ಕೆ ಬಂದ್ ಮಾಡಲಾಗುತ್ತಿತ್ತು. ಈ ನಡುವೆ ಆರೋಗ್ಯ ಇಲಾಖೆ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್‌ಗಳಲ್ಲಿ ಕಾರ್ಯಾಚರಿಸುವ ವೈದ್ಯರ ಅವಧಿಯನ್ನು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ಗಂಟೆಗೆ ವಿಸ್ತರಿಸಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆಗೆ ತೆರೆದು ರಾತ್ರಿ 8ಗಂಟೆಗೆ ಬಂದ್ ಮಾಡುತ್ತಿದ್ದು, ನಮ್ಮ ಕ್ಲಿನಿಕ್ ಯೋಜನೆ ಗುರಿಯೇ ಬುಡಮೇಲಾಗುವಂತಾಗಿದೆ.

ನಮ್ಮ ಕ್ಲಿನಿಕ್‌ಗೆ ವೈದ್ಯರನ್ನು ನೇಮಕ ಮಾಡುವಂತೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವೈದ್ಯಾಧಿಕಾರಿ ಹುದ್ದೆಗೆ ನಾಲ್ಕೈದು ಬಾರಿ ಅರ್ಜಿ ಆಹ್ವಾನಿಸಿದೆ, ಯಾವುದೇ ವೈದ್ಯರು ಬಂದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ ಮೇಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಲಾಗುವುದು.ಡಾ.ಯೋಗೀಶ್ತಾಲೂಕು ಆರೋಗ್ಯಾಧಿಕಾರಿ ಜನಸಾಮಾನ್ಯರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸೇವೆ ನೀಡಲು ಸಾಧ್ಯವಾಗದಿದ್ದರೆ ನಮ್ಮ ಕ್ಲಿನಿಕ್ ಮುಚ್ಚಿ. ವೈದ್ಯರು ರಜೆ ಹಾಗೂ ವರ್ಗಾವಣೆಯಾದರೆ ದಾದಿಯರು ಡ್ಯೂಟಿ ಡಾಕ್ಟರ್ ಆಗುತ್ತಾರೆ. ಅವರ ಚಿಕಿತ್ಸೆಯಿಂದ ಏನಾದರೂ ಹೆಚ್ಚು ಕಮ್ಮಿಯಾದರೆ ಹೊಣೆಯಾರು?ಸೌಭಾಗ್ಯಮ್ಮ ಸ್ಥಳೀಯರು