ಜಿಲ್ಲೆ

ನಮ್ಮ ಕ್ಲಿನಿಕ್‌ನಲ್ಲಿ ಆರೋಗ್ಯ ಸೇವೆ

ವಿರಾಜಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನಮ್ಮ ಕ್ಲಿನಿಕ್ ಯೋಜನೆ ಪಟ್ಟಣದಲ್ಲಿ ಪ್ರಾರಂಭಗೊಂಡಿರುವುದರಿಂದ ಬಡಜನರಿಗೆ, ಜನಸಾಮಾನ್ಯರಿಗೆ ಸದುಪಯೋಗವಾಗುತ್ತದೆ. ಉಚಿತವಾಗಿ ಸಿಗುವ ಆರೋಗ್ಯ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ನಗರಾಭಿವೃದ್ದಿ ಕೋಶದ ಆಶ್ರದಲ್ಲಿ ಪುರಸಭೆ ವ್ಯಾಪ್ತಿಯ ಮೊಗರಗಲ್ಲಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರತಾಗಿ ಪಟ್ಟಣಗಳ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳ ಒತ್ತಡವನ್ನು ಕಡಿಮೆ ಮಾಡಲು ಇಂತಹ ನಮ್ಮ ಕ್ಲಿನಿಕ್ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 448 ನಮ್ಮ ಕ್ಲಿನಿಕ್‌ಗಳಿದೆ. ಇಂದು 114 ಕೇಂದ್ರಗಳನ್ನು ಏಕಕಾಲದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು.


ಬಡ ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಿದೆ. ಎಲ್ಲ ಕಾಯಿಲೆಗಳಿಗೆ ಕಡಿಮೆ ದರದಲ್ಲಿ ಔಷಧಗಳು ಸಿಗುತ್ತವೆ. ಕೇಂದ್ರ ಔಷಧ ನಿಯಂತ್ರಣ ಮಂಡಳಿ ದೃಢೀಕರಣ ಮಾಡಿದ ನಂತರವೇ ಮಾರುಕಟ್ಟೆಯಲ್ಲಿ ಔಷಧಗಳು ಲಭ್ಯವಾಗುತ್ತವೆ. ಕಡಿಮೆ ದರದಲ್ಲಿ ಔಷಧ ಲಭಿಸುವುದರಿಂದ ಗುಣಮಟ್ಟ ಇಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಜನೌಷಧ ಕೇಂದ್ರದ ಎಲ್ಲ ಔಷಧ ಗುಣಮಟ್ಟದಿಂದ ಕೂಡಿವೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.


ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಮಾತನಾಡಿ, ಸಾಮಾನ್ಯ ರೋಗ ತಪಾಸಣೆಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ 500ರಿಂದ 600 ರೂ. ನೀಡಬೇಕಾಗುತ್ತದೆ. ರಾಜ್ಯ ಸರ್ಕಾರದ ನಮ್ಮ ಕ್ಲಿನಿಕ್ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡರೆ ಯೋಜನೆ ಯಶಸ್ಸು ಕಾಣುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸುವ ಗುರಿ ಇದೆ ಎಂದು ಹೇಳಿದರು.


ಜಿಲ್ಲಾ ಆರೋಗ್ಯಧಿಕಾರಿ ಡಾ ವೆಂಕಟೇಶ್ ಮಾತನಾಡಿ, 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಸರ್ಕಾರ ನಮ್ಮ ಕ್ಲಿನಿಕ್ ಆರಂಭಿಸಿದೆ. ಬೆಳಗ್ಗೆ 9ರಿಂದ 4.30 ರವರೆಗೆ ಆರೋಗ್ಯ ಸೇವೆ ಲಭಿಸಲಿದೆ. ಒಬ್ಬರು ವೈದ್ಯ, ದಾದಿ, ಲ್ಯಾಬ್ ತಂತಜ್ಞ ಇರುತ್ತಾರೆ. ತಪಾಸಣೆ, ಔಷಧ ಉಚಿತವಾಗಿದೆ. 12 ಮಾದರಿಯ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 14 ವಿವಿಧ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಇ ಸಂಜಿವಿನಿ ಮತ್ತು ಟೆಲಿಕೌನ್ಸೆಲಿಂಗ್ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.


ಪುರಸಭೆ ಸದಸ್ಯ ಮತೀನ್ ಮಾತನಾಡಿ, ಪಟ್ಟಣದ 4 ವಾರ್ಡ್‌ಗಳ ಮಧ್ಯದಲ್ಲಿ ನಮ್ಮ ಕ್ಲಿನಿಕ್ ಇದ್ದು ಅಂದಾಜು 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ದಂಧೆ ಹೆಚ್ಚಾಗಿರುವುದರಿಂದ ಈ ಭಾಗದ ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದು ಹೇಳಿದರು.


ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ತಹಸೀಲ್ದಾರ್ ಅರ್ಚನಾ ಭಟ್, ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್, ನಗರ ಯೋಜನಾ ನಿರ್ದೇಶಕ ಬಸಪ್ಪ, ಡಾ. ಫಾತೀಮಾ ಕಾರ್ಯಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್ ಇತರರು ಇದ್ದರು.


ಇದಕ್ಕೂ ಮುನ್ನ ಶಿವಕೇರಿಯಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪುರಸಭೆ ಸಿಬ್ಬಂದಿ ವಸತಿಗೃಹ, 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮುಖ್ಯಾಧಿಕಾರಿ ವಸತಿ ಗೃಹವನ್ನು ಶಾಸಕ ಕೆ.ಜಿ. ಬೋಪಯ್ಯ, ಪುರಸಬೆ ಅಧ್ಯಕ್ಷೆ ಸುಶ್ಮಿತಾ ಇತರರು ಉದ್ಘಾಟಿಸಿದರು.