ಜಿಲ್ಲೆ

ನಮ್ಮ ಕ್ಲಿನಿಕ್‌ಗೆ ವೈದ್ಯೆ ನಿಯೋಜನೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಹೊನ್ನಗಂಗಯ್ಯನಪಾಳ್ಯದ ಟೀಚರ್ಸ್‌ ಬಡಾವಣೆ ಯಲ್ಲಿರುವ ನಮ್ಮ ಕ್ಲಿನಿಕ್‌ಗೆ ವೈದ್ಯರನ್ನು ನಿಯೋಜಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
‘ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರೇ ಇಲ್ಲ’ ಶೀರ್ಷಿಕೆಯಡಿ ಸೆ.16ರಂದು ವಿಜಯವಾಣಿ ಪ್ರಕಟಿಸಿದ್ದ ಸಮಗ್ರ ವರದಿಗೆ ಸ್ಪಂದಿರುವ ಆರೋಗ್ಯ ಇಲಾಖೆ ವೈದ್ಯೆಯನ್ನು ನಿಯೋಜಿಸಿದೆ. 6 ತಿಂಗಳಿಂದ ವೈದ್ಯರನ್ನು ನಿಯೋಜಿಸದೆ ಸಿಬ್ಬಂದಿಯೇ ಚಿಕಿತ್ಸೆ ನೀಡುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸಾಕಷ್ಟು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿತ್ತು.
ವೈದ್ಯರನ್ನು ನಿಯೋಜನೆ ಮಾಡಿದಂತೆ ನಮ್ಮ ಕ್ಲಿನಿಕ್‌ಗೆ ಸೂಚನಾ ಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಅಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆಯನ್ನು ನಿಯೋಜನೆ ಮಾಡಲಾಗಿದೆ. ಜತೆಗೆ ಸೂಚನಾ ನಾಮಫಲಕ ಅಳವಡಿಕೆ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.ಡಾ.ಯೋಗೀಶ್ ತಾಲೂಕು ಆರೋಗ್ಯಾಧಿಕಾರಿ