ಬೇಲೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ತಾಲೂಕಿನ ತೊಳಲು ಗ್ರಾಪಂ ವ್ಯಾಪ್ತಿಯ ಕೋನೇರ್ಲು ಗ್ರಾಮದ ದ್ಯಾವನಕೆರೆಯ 486 ನೇ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಂ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಂ ಮಾತನಾಡಿ, ಧರ್ಮಸ್ಥಳದ ಪೂಜ್ಯರ ಆಶಯದಂತೆ ನಮ್ಮ ಊರಿಗೊಂದು ಕರೆ ಅದೇ ನಮ್ಮೂರ ಕೆರೆ ಎಂಬ ಕಾರ್ಯಕ್ರಮದಡಿ ಕೆರೆಗಳ ಪುನಶ್ಚೇತನ ಗೊಳಿಸುವುದಕ್ಕೆ ಈಗಾಗಲೇ ಸಂಕಲ್ಪ ಮಾಡಿದ್ದು, ಇಲ್ಲಿವರೆಗೂ 485 ಕೆರೆಗಳ ಹೂಳೆತ್ತುವ ಮೂಲಕ ಪುನಶ್ಚೇತನ ಗೊಳಿಸಿದ್ದೇವೆ. ಕೋನೇರ್ಲು ಗ್ರಾಮದ್ದು ಸೇರಿದರೆ 486 ನೇ ಕೆರೆಯಾಗಿದೆ. ಈ ಗ್ರಾಮದ ಕೆರೆಯೂ 4 ಎಕರೆ ಭೂ ವಿಸ್ತಾರವಿದ್ದು, ಈ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. 7 ಲಕ್ಷ ರೂ, ವೆಚ್ಚದಲ್ಲಿ ಪುನಶ್ಚೇತನ ಗೊಳಿಸಲಾಗುತ್ತಿದೆ. ಈ ಕೆರೆ ಪುನಶ್ಚೇತನದ ನಂತರ 500 ಎಕರೆ ರೈತರಿಗೆ, ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಸದುಪಯೋಗ ವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚುವುದರಿಂದ ಪರಿಸರವೂ ಸಹ ಉತ್ತಮವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ಮಮತಾ ರಾವ್, ತಾಲೂಕು ಯೋಜನಾಧಿಕಾರಿ ಸಂಧ್ಯಾಶೆಟ್ಟಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ತೊಳಲು ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಕೆರೆ ವಿಭಾಗದ ಪ್ರಾದೇಶಿಕ ಅಭಿಯಂತರ ಸುರೇಶ್, ಮಂಜೇಗೌಡ ಸೇರಿದಂತೆ ಇತರರಿದ್ದರು.