ಹಾಸನ : ಬಿಜೆಪಿಯವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿಲ್ಲ. ಜೆಡಿಎಸ್‌ನವರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ನಮ್ಮ ಪಕ್ಷ ಬಂದಿರುವ ಅತಿಥಿಯಷ್ಟೇ ಎಂದು ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. 303 ಸ್ಥಾನ ಪಡೆದಿರುವವರ ಹತ್ತಿರ ಒಂದು ಸೀಟ್ ಪಡೆದವರು ಬಂದಿದ್ದಾರೆಯೇ ಹೊರತು, ನಾವು ಅವರ ಬಳಿ ಹೋಗಿಲ್ಲ. ರಾಷ್ಟ್ರೀಯತೆ, ದೇಶ ಮೊದಲು, ವ್ಯಕ್ತಿ ಕೊನೆ ಎಂಬ ನಮ್ಮ ಪಕ್ಷದ ಅಜೆಂಡಾವನ್ನು ಅವರು ಒಪ್ಪಿಕೊಂಡು ಬಂದಿದ್ದಾರೆ. ನಮ್ಮಲ್ಲಿ ವಂಶಪಾರಂಪರಿಕ ಆಡಳಿತ, ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ಅದನ್ನು ಮನದಟ್ಟು ಮಾಡಿಕೊಂಡು, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಬಂದಿರುವುದು ಸ್ವಾಗತ ಮಾಡುವಂತಹ ವಿಚಾರ ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಟಾಂಗ್ ನೀಡಿದರು.
ಸೀಟು ಹಂಚಿಕೆ ಇನ್ನೂ ತೀರ್ಮಾನ ಆಗಿಲ್ಲ. ಆರ್‌ಪಿಐನವರು ಕೂಡ ಹಾಸನ ಕ್ಷೇತ್ರವನ್ನು ಕೇಳುತ್ತಿದ್ದಾರೆ. ಇಲ್ಲಿ ಗೆಲುವು ಒಂದೇ ಮಾನದಂಡ. ನಾವೆಲ್ಲ ಕುಳಿತು ತೀರ್ಮಾನ ಮಾಡುತ್ತೇವೆ. ಏನು ಬೇಕಾದರೂ ಆಗಬಹುದು. ಬಿಜೆಪಿಯ ಕಾರ್ಯಕರ್ತನೇ ಅಭ್ಯರ್ಥಿಯಾದರೆ ಅವರೇ ಬೆಂಬಲ ಕೊಡಬೇಕಾಗಿ ಬರಬಹುದು. ಯಾರಿಗೆ ಗೊತ್ತು, ಹೇಗೆ ಏನು ಬೇಕಾದರೂ ಬದಲಾಗಬಹದು ಎಂದರು.
ನಮ್ಮ ಆಚಾರ, ವಿಚಾರವನ್ನು ಅವರು ಒಪ್ಪಿಕೊಳ್ಳಲಿ. ಅವರು ನಮ್ಮ ಮನೆಗೆ ಬಂದಿರುವ ಅತಿಥಿ. ಕಾಫಿ, ಟೀ, ಊಟನೂ ಕೊಡುತ್ತೇವೆ. ಆದರೆ ನಾವು ಕೊಡುವ ಊಟ ಮಾಡಬೇಕಷ್ಟೆ. ಅವರು ನನಗೆ ಇದೇ ಬೇಕು, ಅದೇ ಬೇಕು ಅಂತ ಕೇಳಬಾರದು. ಏಕೆಂದರೆ ಅವರು ನಮ್ಮ ಮನೆಗೆ ಬಂದಿದ್ದಾರೆ. ಅಲ್ಲದೆ ನಮ್ಮ ರಾಷ್ಟ್ರೀಯ ನಾಯಕರು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಅದಕ್ಕೆ ಅವರನ್ನು ಒಳ್ಳೆಯ ರೀತಿ ನೋಡಿಕೊಳ್ಳುತ್ತೇವೆ. ಅತಿಥಿ ಸತ್ಕಾರ ಮಾಡುತ್ತೇನೆ ಎಂದು ಹೇಳಿದರು.
ಸರಿಯಾದ ಅಂಕಿ-ಅಂಶ ತಿಳಿಸಬೇಕು
ತಮಿಳುನಾಡಿಗೆ ನೀರು ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬರಗಾಲ ಎರಡು-ಮೂರು ವರ್ಷ ಸತತವಾಗಿ ಇದ್ದರೂ ಇರಬಹುದು. ಆದರೆ ನಾವು ಈ ವರ್ಷ ಎಷ್ಟು ನೀರು ಬೇಕು ಅಂತ ತಮಿಳುನಾಡು ಜತೆ ವಾದ ಮಾಡುತ್ತಿದ್ದೇವೆ. ಮುಂದಿನ ಎರಡು ಮೂರು ವರ್ಷಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರದ ರೀತಿಯಲ್ಲಿ ಎಷ್ಟು ಟಿಎಂಸಿ ನೀರು ಬೇಕು ಎನ್ನುವ ಅಂಕಿ- ಅಂಶವನ್ನು ಕೋರ್ಟ್‌ಗೆ ತಿಳಿಸಬೇಕು ಎಂದರು.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವು ನಾಯಕರು ಸೇರ್ಪಡೆ ವಿಚಾರಕ್ಕೆ ಉತ್ತರಿಸಿದ ಪ್ರೀತಂಗೌಡ ಅವರು, ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.
4000 ಮತ ಪಡೆದ ಪಕ್ಷಕ್ಕೆ ಹೋಗ್ತೀನಾ?
ನಿಮಗೆ ಕಾಂಗ್ರೆಸ್ ಗಾಳ ಹಾಕುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೀತಂಗೌಡ ರಾಜಕಾರಣಕ್ಕೆ ಬಂದಿರುವುದು ತತ್ವ ಸಿದ್ಧಾಂತದ ಆಧಾರದ ಮೇಲೆ. ಈ ಹಿಂದೆ 6 ಸಾವಿರ ಮತ ಪಡೆಯುತ್ತಿದ್ದ ಬಿಜೆಪಿ ಈಗ 78 ಸಾವಿರ ಮತ ಪಡೆಯುವ ಮಟ್ಟಕ್ಕೆ ಬಂದಿದೆ. ಇದನ್ನು ಬಿಟ್ಟು ಕೇವಲ 4 ಸಾವಿರ ಓಟು ಪಡೆದ ಪಕ್ಷಕ್ಕೆ ನಾನು ಹೋಗುತ್ತೇನಾ ಎಂದು ಮರುಪ್ರಶ್ನಿಸಿದರು.