ಜಿಲ್ಲೆ

ನಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಸಿಎಂ ಉದ್ಘಾಟನೆ:ಎಚ್.ಡಿ ರೇವಣ್ಣ ಆಕ್ರೋಶ

ಹಾಸನ: ನಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 1ರಂದು ಆಗಮಿಸುತ್ತಿದ್ದಾರೆ ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಲ್.ವಿ.ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಹಾಗು ವಿದ್ಯಾರ್ಥಿ, ಕ್ರೀಡಾ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಗ್ಯಾರಂಟಿ ಹಿಂದೆ ಬಿದ್ದು ಅಭಿವೃದ್ಧಿಯನ್ನೇ ಮರೆತುಬಿಟ್ಟಿದೆ. ನಮ್ಮ ಅವಧಿಯಲ್ಲಿ ಆಗಿರುವ ಕಟ್ಟಡಗಳ ಉದ್ಘಾಟಿಸಲು ಇವರು ಬರುತ್ತಾರೆ. ನಗರದಲ್ಲಿ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಮ್ಮ ಕಾಲದಲ್ಲಿ ನಿರ್ಮಾಣವಾಗಿದೆ. ನಗರದ ಪ್ರವಾಸಿ ಮಂದಿರ ಕಟ್ಟಿಸಿದ್ದು ನಾನು ಆದರೆ ಅದನ್ನು ಅವರು ಉದ್ಘಾಟಿಸುತ್ತಿದ್ದಾರೆ. ಈಗಾಗಲೇ ಅಲ್ಲಿನ ಒಂದು ಕಟ್ಟಡವನ್ನ ಉಪವಿಭಾಗಾಧಿಕಾರಿ ಕಚೇರಿ ಮಾಡಿದ್ದಾರೆ. ಮತ್ತೊಂದು ಕಟ್ಟಡವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ. ನಾನೇನು ಐಬಿಯಲ್ಲಿ ಮಲಗುವುದಿಲ್ಲ, ಅವರೇ ಏನಾದರೂ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೆಲಸಗಳಾಗಿವೆ. 2007ರಲ್ಲಿ ನಾನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಗೆ 20 ಪಿಯು, 40 ಪದವಿ ಹಾಗು 15 ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸಿದೆ. ಹಾಸನ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಗೂ ಶಿಕ್ಷಣ ಸಂಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದೇನೆ. ಅಲ್ಲಿತನಕ 48 ತಾಲ್ಲೂಕು ಕೇಂದ್ರಗಳಲ್ಲಿ ಪಿಯು, 58 ತಾಲ್ಲೂಕಿನಲ್ಲಿ ಪದವಿ, 4 ಜಿಲ್ಲಾ ಕೇಂದ್ರಗಳಲ್ಲಿ ಪದವಿ ಕಾಲೇಜುಗಳಿರಲಿಲ್ಲ. ನಮ್ಮ ಆಡಳಿತಾವಧಿಯಲ್ಲೇ ಬೇರೆ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಯಿತು ಎಂದರು.
ನಗರದ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿಗೆ ಎರಡು ಹಂತದಲ್ಲಿ 120 ಕೋಟಿ ರೂ. ಅನುದಾನ ಕೊಡಿಸಿದ್ದೇನೆ. ದೇಶದಲ್ಲೇ ಅತಿಹೆಚ್ಚು ಅಂದರೆ 18 ವಿಭಾಗಗಳನ್ನು ತೆರೆಯಲಾಯಿತು. ಆದರೆ ಕಾಲೇಜಿನ ಘನತೆ ಹಾಳು ಮಾಡುವ ಉದ್ದೇಶದಿಂದಲೇ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಕಾಲೇಜಿನ ವಿಶಾಲ ಮೈದಾನದ ಮಧ್ಯದಲ್ಲಿ ಯಾವುದೋ ಕಟ್ಟಡ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅಧೀಕಾರಕ್ಕೆ ಬಂದ ಸಂದರ್ಭದಲ್ಲಿ ಈ ಕಟ್ಟಡವನ್ನು ಒಡೆದು ಹಾಕುವುದಾಗಿ ತಿಳಿಸಿದರು.
ಸರ್ಕಾರ ಕೇವಲ ಗ್ಯಾರೆಂಟಿಗಳ ಹಿಂದೆ ಹೊರಟಿದೆ. ಅಭಿವೃದ್ಧಿಯನ್ನು ಮರೆತಿದ್ದಾರೆ. ಸರ್ಕಾರಕ್ಕೆ ಶಾಲೆಗಳಿಗೆ ಶಿಕ್ಷಕರನ್ನ ನೇಮಕ ಮಾಡಲು ಅವರಿಗೆ ಯೋಗ್ಯತೆ ಇಲ್ಲ, ಅಲ್ಲದೆ ಹಲವು ಅಭಿವೃದ್ಧಿ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿದ್ದು, 30ರಷ್ಟು ಕಮಿಷನ್ ನಡೆಯುತ್ತಿದೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ ಎಂದು ದೂರಿದರು.
ಅರಸೀಕೆರೆಯ ವೆಂಕಟ್‌ಸ್ವಾಮಿ ಅವರು ಪಾಲಿಟೆಕ್ನಿಕ್‌ಗಾಗಿ 40 ಎಕರೆ ಜಾಗವನ್ನು ನೀಡಿದರು ಇದರಿಂದ ಸಾವಿರಾರು ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಕಾಲೇಜಿಗೆ ಕಂಪ್ಯೂಟರ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ ಇದೆ.ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೊಸ ಕ್ರಾಂತಿಯನ್ನ ಸೃಷ್ಟಿ ಮಾಡುವ ಮೂಲಕ ಮಹಿಳಾ ಕಾಲೇಜು, ಗೃಹ ವಿಜ್ಞಾನ ಕಾಲೇಜು ಸೇರಿದಂತೆ ಹಲವು ವಿದ್ಯಾ ಸಂಸ್ಥೆಗಳನ್ನ ತರುವಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಎಲ್ ವಿ ಪಾಲಿಟೆಕ್ನಿಕ್ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ್,ಕಾಲೇಜು ಪ್ರಾಂಶುಪಾಲೆ ಎಸ್.ಬಿ.ವೀಣಾ, ರಿಜಿಸ್ಟ್ರಾರ್ ಎಸ್.ವಿಜಯಶ್ರೀ, ಡಿ.ಕುಮಾರ್ ಹಾಗು ಇತರರಿದ್ದರು.