ಜಿಲ್ಲೆ

ನಮಸ್ತೆ ಜಗದ್ವಾಪಿಕೆ ವಿಶ್ವರೂಪೇ…

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆ ದೇಗುಲಗಳಲ್ಲಿ ಶ್ರಾವಣ ಮಾಸದ ಅಂಗವಾಗಿ ದೇವಿಯರ ಮೂರ್ತಿಗಳಿಗೆ ಮಾಸದ ಮೊದಲ ಶುಕ್ರವಾರ ಪುಷ್ಪ ಸೇರಿ ವಿವಿಧ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು.

ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ ದೇವಿ ಸೇರಿ ವಿವಿಧ ದೇಗುಲಗಳಲ್ಲಿ ಮುಂಜಾನೆಯಿಂದಲೇ ಅಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಹಲವು ಬಗೆಯ ಪುಷ್ಪಗಳಿಂದ ಸಿಂಗರಿಸಿದ ನಂತರ ಮೊದಲ ಪೂಜೆ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಏಕನಾಥೇಶ್ವರಿ ದೇವಿ ದೇಗುಲ ಹೊರತುಪಡಿಸಿ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9.30ರ ವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಷ್ಟಾರ್ಥ ಸಿದ್ಧಿಗಾಗಿ ಅನೇಕರು ಪ್ರಾರ್ಥಿಸಿಕೊಂಡರು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ಮಾಸದ ಮೊದಲ ಶುಕ್ರವಾರ ನಗರ ಸೇರಿ ಜಿಲ್ಲಾದ್ಯಂತ ‘ಶುಕ್ರಗೌರಿ’ ವ್ರತಾಚರಣೆಯನ್ನು ಹಿಂದು ಧರ್ಮದ ಬಹುತೇಕ ಮಹಿಳೆಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಸಂಭ್ರಮಿಸಿದರು.

ವ್ರತಾಚರಣೆ ಅಂಗವಾಗಿ ದೇವರ ಕೋಣೆಗಳು ಶುಚಿಗೊಂಡಿದ್ದವು. ತಳಿರು-ತೋರಣಗಳಿಂದ ಅಲಂಕರಿಸಿ, ಪಾರ್ವತಿ ದೇವಿ ಸ್ವರೂಪಿಣಿಯಾದ ಶುಕ್ರಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ಎಂದಿನ ಪರಂಪರೆಯಂತೆ ಪೂಜೆ ನೆರವೇರಿಸಿದರು. ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬಿದರು.

ಮೊದಲ ಶುಕ್ರವಾರದಿಂದ ಆರಂಭವಾಗುವ ಈ ವ್ರತಾಚರಣೆಯೂ ನಾಲ್ಕು ವಾರವೂ ಅತ್ಯಂತ ವಿಶೇಷ, ವೈಭವೋಪೇತವಾಗಿ ಪೂಜೆ ನೆರವೇರಿಸುವ ಮೂಲಕ ಮಹಿಳಾ ಭಕ್ತರು ಭಕ್ತಿಯಲ್ಲಿ ಮಿಂದೇಳಲಿದ್ದಾರೆ. ಕುಟುಂಬಕ್ಕೆ ಶುಭವನ್ನುಂಟು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ ಪರಂಪರೆ ಮುಂದುವರೆದಿರುವುದು ವಿಶೇಷ.