ಜಿಲ್ಲೆ

ನಮಗೆ ಬೇಕಿರುವುದು ವೈಚಾರಿಕತೆಯ ದಂಗಲ್

ಕೆ.ಆರ್.ಪೇಟೆ: ಜಾತಿ, ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಮೌಢ್ಯತೆ, ಪವಾಡಗಳು, ಮೂಢನಂಬಿಕೆ ನಮಗೆ ಬೇಡ. ನಮಗೆ ಬೇಕಿರುವುದು ವೈಜ್ಞಾನಿಕತೆ ಹಾಗೂ ಮಾನವೀಯ ಮೌಲ್ಯ ಎಂದು ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಹೇಳಿದರು.


ತಾಲೂಕಿನ ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಅಮವಾಸ್ಯೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಅಕ್ಷರ ಅಮಾವಾಸ್ಯೆ ಜಾಗೃತಿ-2 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ದೇಶಾದ್ಯಂತ ಧರ್ಮದ ದಂಗಲ್ ನಡೆಯುತ್ತಿದೆ, ನಮಗೆ ಧರ್ಮದ ದಂಗಲ್ ಅಲ್ಲ. ವಿಜ್ಞಾನ, ವೈಚಾರಿಕತೆಯ ದಂಗಲ್. ವೈಜ್ಞಾನಿಕ ಕ್ರಾಂತಿಯ ಮೂಲಕ ಆರೋಗ್ಯವಂತ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದು. ಶ್ರೀಸಾಮಾನ್ಯನ ಮನಸ್ಸಿನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಅಕ್ಷರ ಕ್ರಾಂತಿಯ ಮೂಲಕ ಜ್ಞಾನದ ಬೆಳಕಿನ ಹಣತೆಯನ್ನು ಬೆಳಗಬಹುದು. ಅಕ್ಷರ ಜ್ಞಾನದ ಬೆಳಕಿನ ಶಕ್ತಿಗೆ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಿ ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮ ಸಮಾಜವನ್ನು ಕಟ್ಟಬಹುದು ಎಂದು ಪ್ರತಿಪಾದಿಸಿದರು.


ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ವಿಶ್ವದಲ್ಲಿಯೇ ಯಾವುದೂ ಇಲ್ಲ, ಮನುಷ್ಯತ್ವವನ್ನು ಪ್ರೀತಿಸುವ, ಸಹೋದರತ್ವಕ್ಕೆ ಒತ್ತಾಸೆ ನೀಡುವ, ಮೌಢ್ಯತೆಯನ್ನು ಹೊಡೆದೋಡಿಸುವ ವೈಚಾರಿಕ ದಂಗಲ್ ಇಂದು ಹೆಚ್ಚಾಗಿ ನಡೆಯಬೇಕಾಗಿದೆ. ಇಂದು ಅಕ್ಷರ ಅಮಾವಾಸ್ಯೆಯ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ, ಆದ್ಯಾತ್ಮ ಹಾಗೂ ವಿಜ್ಞಾನ ಕ್ಷೇತ್ರದ ಸಾಧಕರ ಸಂಗಮವಾಗಿದೆ. ಅಮಾವಾಸ್ಯೆಯ ಕತ್ತಲನ್ನು ಹೊಡೆದೋಡಿಸಿ ಜ್ಞಾನದ ಜ್ಯೋತಿ ಬೆಳಗುತ್ತಿದೆ ಎಂದು ಹೇಳಿದರು.


ನಾವು ಭಾರತದ ಸಂವಿಧಾನವನ್ನು ಗೌರವಿಸಬೇಕು. ಮೌಢ್ಯತೆ, ಕಂದಾಚಾರಗಳು ಸೇರಿದಂತೆ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾದ ನಾಗರಿಕ ಮೌಲ್ಯಗಳಿಗೆ ಒತ್ತು ನೀಡುವ ಮಾನವ ಧರ್ಮ ಇಂದು ನಮಗೆ ಬೇಕಾಗಿದೆ. ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಭಾವನೆಯನ್ನು ನಮ್ಮ ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.


ಸನಾತನ ಧರ್ಮ ರತ್ನಾಕರ ಡಾ.ಮಾದೇಶ್ ಗುರೂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ನಾಡಿನ ಜಾನಪದ ರತ್ನ ಡಾ.ಆಲೂರು ನಾಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಪಂಚಭೂತೇಶ್ವರ ಟ್ರಸ್ಟ್‌ನ ಕಾರ್ಯದರ್ಶಿ ಕಾಂತರಾಜು, ಉಪನ್ಯಾಸಕ ಕತ್ತರಘಟ್ಟ ವಾಸು, ಕಾಡುಮೆಣಸ ಚಂದ್ರು, ದೇವಿಕಾ ಹುಲಿಕಲ್‌ನಟರಾಜು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.