ಬಣಕಲ್: ಪರ್ಯಾಯ ಜಾಗ ನೀಡಲು ಸಾಧ್ಯವಾಗದಿದ್ದರೆ ವಿಷ ನೀಡಿ. ಕೇವಲ ಭರವಸೆ ನೀಡಿ ಜಾಗದ ನಿರೀಕ್ಷೆಯಲ್ಲಿ ಬದುಕುವಂತೆ ಮಾಡಬೇಡಿ. ಬಾಡಿಗೆ ಮನೆಯಲ್ಲಿ ಎರಡು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಮನೆಕಳೆದುಕೊಂಡವರಿಗೆ ಈವರೆಗೂ ಸರ್ಕಾರ ಪರ್ಯಾಯ ಜಾಗ ಗುರುತಿಸಿಲ್ಲ ಎಂದು ಮಲೆಮನೆ ಸಂತ್ರಸ್ತರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರನ್ನು ತರಾಟೆಗೆ ತೆಗೆದುಕೊಂಡು.
ಸಂತ್ರಸ್ತ ಮಲೆಮನೆ ಗ್ರಾಮದ ಎಂ.ಎನ್.ಅಶ್ವತ್ಥ್ ಮಾತನಾಡಿ, 2019ರ ಪ್ರವಾಹದಿಂದ ಮನೆ ಕೊಚ್ಚಿಹೋಗಿದೆ. ಬೀದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಮನೆ ಕಳೆದುಕೊಂಡ ನಮಗೆ ಸರ್ಕಾರ ಬಾಡಿಗೆ ಮನೆಯಲ್ಲಿ ವಾಸಿಸಲು ಹೇಳಿ ಬಾಡಿಗೆ ಹಣ ನೀಡುವ ಭರವಸೆ ನೀಡಿತ್ತು. ಆದರೆ 5 ತಿಂಗಳು ಮಾತ್ರ ಬಾಡಿಗೆ ನೀಡಿದೆ. ಎರಡೂವರೆ ವರ್ಷದಿಂದ ಬಾಡಿಗೆ ನೀಡಿಲ್ಲ ಎಂದು ದೂರಿದರು.
ನೆರೆಯಿಂದ ಮನೆ ಕಳೆದುಕೊಂಡವರಿಗೆ ಈವರೆಗೂ ನೆರವು ಕಲ್ಪಿಸಿಲ್ಲ. ಪರ್ಯಾಯ ಜಾಗ ಗುರುತಿಸಿಲ್ಲ. ಮುಖ್ಯಮಂತ್ರಿ, ಸಚಿವರು, ಶಾಸಕರು ಎಲ್ಲ ಜನಪ್ರತಿನಿಧಿಗಳು ಕೇವಲ ಗ್ರಾಮಕ್ಕೆ ಭೇಟಿ ನೀಡಿ ನಿವೇಶನದ ಆಶ್ವಾಸನೆ ನೀಡುತ್ತಿದ್ದಾರೆ ಹೊರತು ಪುನರ್ವಸತಿ ಕಲ್ಪಿಸುತ್ತಿಲ್ಲ. ನಿಮಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದಿದ್ದರೆ ಹೇಳಿ ಹೇಗೂ ಬದುಕುತ್ತೇವೆ. ಸುಳ್ಳು ಭರವಸೆ ನೀಡಿ ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.