ಬಾಗಲಕೋಟೆ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ದೇಶಪಾಂಡೆ ಅವರ ಮನೆಯ ಮೇಲೆ ಗ್ರಹಣ ವೀಕ್ಷಣೆ ದೃಶ್ಯ. 
ಜಿಲ್ಲೆ

ನಭೋಮಂಡಲದ ಕೌತುಕ ವಿಕ್ಷಣೆ..!

ಬಾಗಲಕೋಟೆ: ಸೂರ್ಯ ಗ್ರಹಣ ಹಿನ್ನಲೆಯಲ್ಲಿ ನಭೋಮಂಡಲದ ನಡೆಯುವ ಖಗೋಳ ವಿಸ್ಮಯಕ್ಕೆ ಬಾಗಲಕೋಟೆ ಸಾಕ್ಷಿಯಾಯಿತು. ಜಿಲ್ಲೆಯ ನಾನಾ ಭಾಗದಲ್ಲಿ ಸಾರ್ವಜನಿಕರು, ವಿಜ್ಞಾನ ಶಿಕ್ಷಕರು ವೀಕ್ಷಣೆ ಮಾಡಿದರು. ಮೋಕ್ಷವಾಗುತ್ತಿದ್ದಂತೆ ಬಾದಾಮಿ ಬನಶಂಕರಿ ದೇವಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸೂರ್ಯ ಗ್ರಹಣ ಹಿನ್ನಲೆ ನಾಡಿನ ಶಕ್ತಿ ದೇವತೆ ಬಾದಾಮಿ ಬನಶಂಕರಿ ದೇವಿ ಗರ್ಭಗುಡಿ ದರ್ಶ ಬಂದ್ ಮಾಡಲಾಗಿತ್ತು. ಸಂಜೆ ೪ ಗಂಟೆ ೪೫ ನಿಮಿಷದಿಂದ ಆರಂಭವಾದ ಗ್ರಹಣ ೬.೨೮ ನಿಮೀಷಕ್ಕೆ ಮುಕ್ತಾಯವಾಯಿತು. ಈ ವೇಳೆ ಭಕ್ತರಿಗೆ ದರ್ಶನಕ್ಕಿಲ್ಲ ಅವಕಾಶ ಇರಲಿಲ್ಲ. ಗ್ರಹಣ ಕಾಲಕ್ಕೆ ದೇವಿ ಮೂರ್ತಿ ಜಲಾಭಿಷೇಕ ಮಾಡಲಾಯಿತು. ಮೋಕ್ಷದ ನಂತರ ದೇವಿಗೆ ವಿವಿಧ ಪೂಜೆ ಜರುಗಿತು.

ಇದೇ ರೀತಿ ತುಳಸಿಗೇರಿಯ ಆಂಜನೇಯ ದೇವಸ್ಥಾನ, ಮಹಾಕೂಟದ ಮಹಾಕೋಟೇಶ್ವರ, ಚಿಕ್ಕ ಸಂಗಮದ ಸಂಗಮೇಶ್ವರ ದೇವಸ್ಥಾನ, ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನಗಳಲ್ಲಿ ಶುದ್ಧಿ ಕಾರ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಗ್ರಹಣ ಬಿಟ್ಟ ಬಳಿಕ ವಿವಿಧ ಮಠಾಧಿಶರು, ಅರ್ಚಕರು, ಪುರೋಹಿತರು, ಸಾರ್ವಜನಿಕರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದರು.

ಇನ್ನು ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿ ನಭೋಮಂಡಲದ ಕುತೂಹಲ ಸಾರ್ವಜನಿಕರು ವೀಕ್ಷಣೆ ಮಾಡಿದರು. ನಗರದ ವಿದ್ಯಾಗಿರಿಯ ೨೨ನೇ ಕ್ರಾಸ್‌ನಲ್ಲಿರುವ ಉಪಪ್ರಾಂಶುಪಾಲ, ವಿಜ್ಞಾನ ಶಿಕ್ಷಕ ನಾಗರಾಜ ದೇಶಪಾಂಡೆ ಅವರ ಮನೆಯ ಮಹಡಿಯ ಮೇಲೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಫಿಲ್ಟರಗಳನ್ನ ಬಳಸಿ ಗ್ರಹಣ ವೀಕ್ಷಣೆ ಮಾಡಲಾಯಿತು. ಬಾಗಲಕೋಟೆ ನಗರದಲ್ಲಿ ಭಾಗಶಃ ಅರ್ಧಚಂದ್ರನಂತೆ ಸೂರ್ಯ ಕಂಗೊಳಿಸಿದ. ಉಳಿದ ಜಿಲ್ಲೆಯ ನಾನಾ ಭಾಗದಲ್ಲಿ ಗ್ರಹಣ ವೀಕ್ಷಣೆ ಮಾಡಿ ವೈಜ್ಞಾನಿಕ ಅರಿವು ಮೂಡಿಸಲಾಯಿತು.

ಒನಕೆ ನಿಲ್ಲಿಸಿ ಗ್ರಹಣ ಪ್ರಮಾಣ ಅಳೆದರ: ಗ್ರಹಣ ವೇಳೆ ಈ ಭಾಗದಲ್ಲಿ ವಿಚಿತ್ರ ನಂಬಿಕೆಗಳಿವೆ. ಬಾಗಲಕೋಟೆ ತಾಲೂಕಿನ ಅಂಗಕಲಗಿ ಗ್ರಾಮದಲ್ಲಿ ನೀರಲ್ಲಿ ಒನಕೆ ನಿಲ್ಲುಸುವ ಮೂಲಕ ಗ್ರಹಣದ ಪ್ರಮಾಣ ಅಳೆಯುವ ಪುರಾತನ ನಂಬಿಕೆ ಪ್ರಚೂರ ಪಡಿಸಲಾಯಿತು. ಗ್ರಾಮೀಣ ಭಾಗದಲ್ಲಿ ಒನಕೆ ಇಟ್ಟು ಗ್ರಹಣ ಪ್ರಮಾಣ ಅಳೆಯುವ ಪದ್ದತಿ ಇದ್ದು, ಅಂಕಲಗಿಯಲ್ಲಿ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ಇಟ್ಟು ಜನರು ಗ್ರಹಣ ನೋಡಿದರು. ಲಚ್ಚಪ್ಪ ಪೆಟ್ಲೂರ ಅವರ ಮನೆಯಲ್ಲಿ ಒನಕೆ ಮೂಲಕ ಗ್ರಹಣ ಪ್ರಮಾಣ ಲೆಕ್ಕಾಚಾರ ಮಾಡಿದರು. ಗ್ರಹಣ ಕಾಲದಲ್ಲಿ ಯಾವುದೇ ಚಟುವಟಿಕೆ ಮಾಡದೇ ದೇವರ ಸ್ಮರಣೆ ಮಾಡಿದರು.

ಧಾರ್ಮಿಕ ಆಚರಣೆ : ಗ್ರಹಣ ಹಿನ್ನೆಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಸಮೀಪ ಸಂಗಮೇಶ್ವರ ದೇವಸ್ಥಾನದ ಬಳಿ ಕೃಷ್ಣ ನದಿಯಲ್ಲಿ ಸಾರ್ವಜನಿಕರಿಂದ ವಿವಿಧ ಧಾರ್ಮಿಕ ಆಚರಣೆಗಳ ನೆರವೇರಿಸಲಾಯಿತು. ಕೃಷ್ಣ ನದಿ ಪಾತ್ರದಲ್ಲಿ ಹೋಮ-ಹವನ ಜರುಗಿದವು. ನದಿಯಲ್ಲಿ ಕುಳಿತು ಸಾರ್ವಜನಿಕರು ಶ್ರದ್ಧಾ ಭಕ್ತಿಗಳಿಂದ ಮಂತ್ರ ಸಿದ್ಧಿಗಾಗಿ ಜಪತಪ ಮಾಡಿದರು.