ಜಿಲ್ಲೆ

ನಬಾರ್ಡ್ ನತ್ತ ಡಿಸಿಸಿ ಬ್ಯಾಂಕ್‌ಗಳ ಚಿತ್ತ

ಡಿ.ಪಿ.ನಾಗರಾಜ ಶ್ರೇಷ್ಠಿ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಶೂನ್ಯಬಡ್ಡಿ ದರದಲ್ಲಿ ರಾಜ್ಯದ ರೈತರಿಗೆ ಬೆಳೆ ಸಾಲ ವಿತರಿಸಬೇಕಿರುವ ಡಿಸಿಸಿ ಬ್ಯಾಂಕ್‌ಗಳ ಚಿತ್ತವೀಗ ನಬಾರ್ಡ್‌ನತ್ತ ನೆಟ್ಟಿದೆ.

ಶೇ. 4.9 ಬಡ್ಡಿದರದಲ್ಲಿ 2023-24ನೇ ಸಾಲಿನಲ್ಲಿ ರಾಜ್ಯಕ್ಕೆ 6300 ಕೋಟಿ ರೂ. ಸಾಲ ಕೊಟ್ಟಿದ್ದ ನಬಾರ್ಡ್, 2024-25ನೇ ಸಾಲಿನಲ್ಲಿ ಈ ಮೊತ್ತವನ್ನು 3200 ಕೋಟಿ ರೂ.ಗೆ (ಶೇ.58 ಕಡಿಮೆ)ಇಳಿಸಿತ್ತು.

ನಬಾರ್ಡ್‌ನಿಂದ ಈ ಮೊತ್ತ ಕಡಿತದ ನಡೆಯಿಂದ ಆಘಾತಕ್ಕೆ ಒಳಾಗದ ಬ್ಯಾಂಕ್‌ಗಳ ಸಹಕಾರಿ ಧುರೀಣರು ಸಿಎಂ ಸಿದ್ದರಾಮಯ್ಯ ಅವರಿಗೆ ಬ್ಯಾಂಕ್‌ಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದ್ದರು. ನಬಾರ್ಡ್‌ನಿಂದ ಹೆಚ್ಚಿನ ನೆರವು ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು.

ಪ್ರಸಕ್ತ ಸಾಲಿನಲ್ಲಿ ರೈತರಿಗೆ ಬೆಳೆ ಸಾಲ ವಿತರಣೆಗೆ ಗುರಿ ನಿಗದಿ ಮಾಡಿಕೊಂಡು, ಕಳೆದ ಏಪ್ರಿಲ್ ಒಂದರಿಂದ ಸಾಲ ವಿತರಿಸುತ್ತಿರುವ ಡಿಸಿಸಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈಗ ಆತಂಕದಲ್ಲಿವೆ. ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ನಬಾರ್ಡ್ ರಾಜ್ಯಕ್ಕೆ ಸಾಲ ಮಂಜೂರು ಮಾಡುತ್ತದೆ.

ಕಳೆದ ವರ್ಷ ಕೊಟ್ಟಿದ್ದಕ್ಕಿಂತ ಸಾಲದ ಮೊತ್ತವನ್ನು ಹೆಚ್ಚಿಸುವುದೇ? ಕಳೆದ ಬಾರಿಯ ಮೊತ್ತವನ್ನೇ ಕೊಡುವುದೇ ಅಥವಾ ಇನ್ನೂ ಕಡಿಮೆ ಮಾಡುವುದೇ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಆತಂಕದಿಂದಲೇ ಅಫೆಕ್ಸ್, ಡಿಸಿಸಿ ಬ್ಯಾಂಕ್‌ಗಳು ನಬಾರ್ಡ್ ನಡೆಯನ್ನು ಎದುರು ನೋಡುತ್ತಿವೆ.

ಪ್ರಸಕ್ತ ಸಾಲಿನಲ್ಲಿ ಹಳಬರಿಗೆ ಪುನಃ ಸಾಲ ನೀಡುವ, ಸಾಲದ ಮೊತ್ತ ಹೆಚ್ಚಿಸುವ, ಎಷ್ಟು ಮಂದಿ ಹೊಸ ರೈತರಿಗೆ ಸಾಲ ವಿತರಿಸಬೇಕು ಎಂಬುದರ ಕುರಿತಂತೆ ಗೊಂದಲಕ್ಕೆ ಸಿಲುಕಿರುವ ಹಲವು ಬ್ಯಾಂಕ್‌ಗಳು ಪೂರ್ಣ ಮನಸ್ಸಿನಿಂದ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಶೇ.8.5 ಬಡ್ಡಿ ದರದಲ್ಲಿ ಸಾಲ ತಂದು, ರೈತರಿಗೆ ವಿತರಿಸುವ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದಿಂದ ಶೇ.7ಬಡ್ಡಿ ದರದ ಸಹಾಯ ಧನವಿದೆ. ನಬಾರ್ಡ್ ಮೊತ್ತ ಹೆಚ್ಚಳವಾದರೆ ಬ್ಯಾಂಕ್‌ಗಳ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತದೆ ಎಂಬ ಅಭಿಪ್ರಾಯ ಸಹಕಾರಿ ವಲಯದಲ್ಲಿದೆ.

ಒಂದೆಡೆ ನಬಾರ್ಡ್ ನೆರವಿನ ಚಿಂತೆ ಒಂದುಕಡೆಯಾದರೆ, ಮತ್ತೊಂದೆಡೆ ಶೂನ್ಯಬಡ್ಡಿ ದರದ ಸಾಲವನ್ನೂ ಸಕಾಲಕ್ಕೆ ಪಾವತಿಸದೆ ಸಾವಿರಾರು ಸಂಖ್ಯೆಯ ಸುಸ್ತಿದಾರರರಿಂದಾಗಿ ಬ್ಯಾಂಕ್‌ಗಳು ಸುಸ್ತಾಗಿವೆ. ಖಾತೆದಾರ ಮರಣ, ಜಂಟಿ ಖಾತೆ, ಉದಾಸೀನತೆ ಹೀಗೆ ಹಲವು ಕಾರಣಗಳಿಂದ ಸುಸ್ತಿದಾರರ ಸಂಖ್ಯೆ ಹೆಚ್ಚುತ್ತಿರುವುದು ಬ್ಯಾಂಕ್‌ಗಳಿಗೆ ತಲೆ ನೋವಾಗಿದೆ.

ಕಳೆದ ಸಾಲಿನಲ್ಲಿ 62,775 ರೈತರಿಗೆ ಶೂನ್ಯಬಡ್ಡಿ ದರದಲ್ಲಿ 519 ಕೋಟಿ ರೂ. ಸಾಲವನ್ನು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಕೊಟ್ಟಿದೆ. ಪ್ರಸಕ್ತ ವರ್ಷ 63 ಸಾವಿರ ರೈತರಿಗೆ 530 ಕೋಟಿ ರೂ., ಶೇ.3 ಬಡ್ಡಿ ದರದಲ್ಲಿ ಮಧ್ಯಮಾವಧಿ(ಭೂ ಅಭಿವೃದ್ಧಿ)ಸಾಲವನ್ನು 750 ರೈತರಿಗೆ 52 ಕೋಟಿ ರೂ. ಹಾಗೂ ಕೃಷಿಯೇತರ ಸಾಲದ ಗುರಿ 285 ಕೋಟಿ ರೂ. ವಿತರಿಸುವ ಗುರಿ ಇಟ್ಟುಕೊಂಡಿದೆ.

---

ಕೋಟ್

ನಬಾರ್ಡ್ ನೆರವಿನ ಬಗ್ಗೆ ಯೋಚಿಸದೆ ರೈತರ ಹಿತದೃಷ್ಟಿಯಿಂದ ಅವರಿಗೆ ಬೆಳೆ ಸಾಲ ವಿತರಿಸಲೇಬೇಕಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಿ. ಸುಧಾಕರ್(ಸಚಿವರು)ನೇತೃತ್ವದ ಆಡಳಿತ ಮಂಡಳಿ ಪ್ರಸಕ್ತ ಸಾಲಿನ ಬೆಳೆ ಸಾಲ ವಿತರಣೆ ಗುರಿ ನಿಗದಿ ಪಡಿಸಿದೆ.

ಇಲ್ಯಾಸ್‌ಉಲ್ಲಾ ಷರೀಫ್, ಎಂಡಿ, ಡಿಸಿಸಿ ಬ್ಯಾಂಕ್, ಚಿತ್ರದುರ್ಗ.

--