ಜಿಲ್ಲೆ

ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಸಹಕಾರ ನೀಡಿ

ಬೇಲೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಸ್ವಚ್ಛ ಭಾರತ್ ಯೋಜನೆ, ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಮೇ 25ರಿಂದ ಜೂನ್ 5ರವರೆಗಿನ ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮನವಿ ಮಾಡಿದರು.


ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪರಿಸರ ಸ್ವಚ್ಛತಾ ಅಭಿಯಾನ ಹಾಗೂ ನನ್ನ ಸ್ವಚ್ಛ ನಗರ ಕಾರ್ಯಕ್ರಮ ಆಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವುಗಳು ಉಪಯೋಗಿಸುವ ತ್ಯಾಜ್ಯವನ್ನು ನವೀಕರಿಸಿ ಮರು ಬಳಸಲು ಸಾಧ್ಯವಾಗದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸುವುದೆ ಈ ಅಭಿಮಾನದ ಪ್ರಮುಖ ಉದ್ದೇಶ ಎಂದರು.


ತ್ಯಾಜ್ಯದ ಪ್ರಮಾಣ ಕಡಿಮೆಗೊಳಿಸುವುದು ಮತ್ತು ಮರು ಬಳಕೆ ಬಗ್ಗೆ ಅಭಿಯಾನ ಹಾಗೂ ಈ ಸಂಬಂಧ ಜಾಗೃತಿ ಮೂಡಿಸಲು ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಮತ್ತು ಪಂಪ್ ಹೌಸ್ ರಸ್ತೆಯಲ್ಲಿನ ಮಳಿಗೆಯನ್ನು ತಾತ್ಕಾಲಿಕವಾಗಿ ಉಪಯೋಗಿಸಿ ಕೊಳ್ಳಲಾಗುವುದು. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಆಟಿಕೆ ವಸ್ತುಗಳು, ಬಟ್ಟೆ, ಜೀನ್ಸ್ ಬಟ್ಟೆ, ಸಮವಸ್ತ್ರ, ಸೀರೆ, ದಿನಪತ್ರಿಕೆ, ಹಳೇಪುಸ್ತಕ, ಪ್ಲಾಸ್ಟಿಕ್ ಚೀಲ, ಕ್ಯಾರಿ ಬ್ಯಾಗ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿ ಸಹಕರಿಸಬೇಕು. ಅಲ್ಲದೆ ಈ ಮಹತ್ತರವಾದ ಕೆಲಸಕ್ಕೆ ಪರಿಸರವಾದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೈ ಜೊಡಿಸಬೇಕು. ಈ ಬಗ್ಗೆ ಸದ್ಯದಲ್ಲೇ ಶಾಲಾ ಕಾಲೇಜು ಮತ್ತು ಸಂಘಟನೆಗಳನ್ನು ಬಳಸಿಕೊಂಡು ಅಭಿಯಾನ ನಡೆಸಲಾಗುವುದು ಎಂದರು.


ಜಿ.ಶಾಂತಕುಮಾರ್ ಮಾತನಾಡಿ, ಎಲ್ಲೆಂದರಲ್ಲಿ ಜನರು ಕಸ ಹಾಕುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆಯಿಂದ ಇಡೀ ನಗರ ಪ್ಲಾಸ್ಟಿಕ್ ಮಯವಾಗಿದೆ. ಅಲ್ಲದೆ, ಪಟ್ಟಣದಲ್ಲಿ 7 ಕಡೆ ಕಸ ಹಾಕುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಗಲು ರಾತ್ರಿ ಪರಿಶೀಲಿಸಿದಾಗ ಮಾತ್ರ ಇಂತಹ ಅಭಿಯಾನಕ್ಕೆ ಅರ್ಥ ಬರುತ್ತದೆ ಎಂದರು.


ಹಸಿರು ಭೂಮಿ ಪ್ರತಿಷ್ಠಾನದ ಖಜಾಂಚಿ ಸೌಭಾಗ್ಯಾ ಮಾತನಾಡಿ, ಮನೆಯಲ್ಲಿಯೇ ಸ್ವಚ್ಛತೆ ಮತ್ತು ಕಸವನ್ನು ಮರು ಬಳಕೆ ಅಥವಾ ಗೊಬ್ಬರ ಮಾಡುವ ವಿಧಾನವನ್ನು ಅಳವಡಿಸಿಕೊಂಡಾಗ ಮಾತ್ರ ಪಟ್ಟಣದಲ್ಲಿ ಕಸ ಸಂಗ್ರಹಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಬಹುದು. ಸದಸ್ಯರು ಕೂಡ ಇಂತಹ ಜಾಗೃತಿ ಅಭಿಯಾನಕ್ಕೆ ಹೆಚ್ಚು ಉತ್ತೇಜನ ನೀಡಲು ಮುಂದಾಗಬೇಕು ಎಂದರು.
ಮುಖ್ಯಾಧಿಕಾರಿ ಮಂಜುನಾಥ್, ಉಪಾಧ್ಯಕ್ಷೆ ಜಮಿಲಾ ತೌಫಿಕ್, ಸದಸ್ಯರಾದ ಜಗದೀಶ್, ಜಮಾಲ್, ಭರತ್, ಪ್ರಭಾಕರ್, ಶ್ರೀನಿವಾಸ, ಮುಖಂಡರಾದ ನೂರ್ ಅಹಮದ್, ಸಂಪತ್ತು, ಮಹೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಿದ್ದರು.