ಜಿಲ್ಲೆ

ನನ್ನ ಸೋಲಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ

ಕೋಲಾರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಕೆ.ಎಚ್​.ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್​ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​, ಸಂಯೋಜಕ ಎಲ್​.ಎ.ಮಂಜುನಾಥ್​, ಎಸ್ಸಿ ಘಟಕ ಅಧ್ಯಕ್ಷ ಜಯದೇವ್​, ಒಬಿಸಿ ಅಧ್ಯಕ್ಷ ಮಂಜುನಾಥ್​ ಇತರರು ಇದ್ದರು

ಕೋಲಾರ
ನನ್ನ ಸೋಲಿನ ನೋವು ಮರೆತಿದ್ದೇನೆ, ಸೋಲಿಗೆ ಸಿದ್ದರಾಮಯ್ಯ ಕಾರಣರಲ್ಲ, ಜನರ ಒಳಿತಿಗಾಗಿ ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲಬೇಕು. ಇದಕ್ಕೆ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಎಐಸಿಸಿ ಸ್ಕ್ರೀನಿಂಗ್​ ಸಮಿತಿ ಸದಸ್ಯ ಕೆ.ಎಚ್​.ಮುನಿಯಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಕಾಂಗ್ರೆಸ್​ ಆಡಳಿತ ಅನಿವಾರ್ಯವಾಗಿದ್ದು, ಜನತೆಗೆ ನಮ್ಮ ಸರ್ಕಾರಗಳು ನೀಡಿದ್ದ ಯೋಜನೆಗಳು, ಜಿಲ್ಲೆಗೆ ಕೆಸಿ ವ್ಯಾಲಿ ಸೇರಿ ಹಲವು ಕೊಡುಗೆ ನೀಡಿರುವುದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಜಿಲ್ಲೆಯ ಮುಖಂಡರ ಭಿನ್ನಾಭಿಪ್ರಾಯಗಳು ಮುಗಿದ ಅಧ್ಯಾಯ. ಸಿದ್ದರಾಮಯ್ಯ ಗೆದ್ದ ಬಳಿಕ ಬಯಲು ಸೀಮೆಗೆ ಶುದ್ಧ ನೀರು ತರುವ ಕಾರ್ಯ ದೊಡ್ಡಮಟ್ಟದಲ್ಲಿ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ತೊಲಗಬೇಕು: ಕೇಂದ್ರದಲ್ಲಿ ಮನಮೋಹನ್​ ಸಿಂಗ್​ ಸರ್ಕಾರ 72 ಸಾವಿರ ಕೋಟಿ ರೂ.ರೈತರ ಸಾಲಮನ್ನಾ ಮಾಡಿತ್ತು. ಆದರೆ ಮೋದಿ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸದೆ ದೊಡ್ಡ ಕಂಪೆನಿಗಳ 150 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿತು. ಕೇಂದ್ರ, ಬಿಜೆಪಿ ಸರ್ಕಾರಗಳಿಂದ ಎಲ್ಲ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್​ ಗಾಂಧಿ ತತ್ವದಡಿ ಕೆಲಸ ಮಾಡುತ್ತ ಬಂದಿದ್ದರೆ, ಬಿಜೆಪಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದೆ. ಅಭಿವೃದ್ಧಿ ಕಡೆಗಣಿಸಿದ್ದು, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರ ಸಂಘದ ಕೆಂಪಯ್ಯ ಹೇಳಿದ್ದನ್ನು ಮಾಡಾಳ್​ ವಿರೂಪಾಕ್ಷಪ್ಪ ಪುತ್ರ ರುಜುವಾತು ಮಾಡಿದ್ದಾನೆ. ಹೀಗಾಗಿ ಬಿಜೆಪಿ ಆಡಳಿತ ತೊಲಗಬೇಕಿದೆ ಎಂದು ಕೆ.ಎಚ್​.ಮುನಿಯಪ್ಪ ತಿಳಿಸಿದರು.

ಬೂತ್​ ಸದಸ್ಯರಿಗೆ ಕಾರ್ಡ್​: ಜಿಲ್ಲಾ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​ ಮಾತನಾಡಿ, ಜಿಲ್ಲಾ ಕಾಂಗ್ರೆಸ್​ನಲ್ಲಿ ಗೊಂದಲವಿಲ್ಲ. ನಾಯಕರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಗ್ರಾಮಾಂತರದ 140, ನಗರದ 98 ಬೂತ್​ ಸಮಿತಿಗಳ ರಚನೆ ಮಾಡುತ್ತಿದ್ದು, ಮಾಸಾಂತ್ಯಕ್ಕೆ ಸದಸ್ಯರಿಗೆ ಗ್ಯಾರಂಟಿ ಕಾರ್ಡ್​ ವಿತರಿಸಲಾಗುವುದು. ಬಳಿಕ ಸಮಾವೇಶ ನಡೆಸುವ ಉದ್ದೇಶವಿದೆ ಎಂದರು.

ಭಾಷಣ ಬಂದ್​ ಮಾಡಿ: ಭಾಷಣ ಮಾಡುವುದರಿಂದ ಮತಗಳು ಬರುವುದಿಲ್ಲ. ಜನರ ಮನೆಗೆ ತೆರಳಿ ಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕಿದೆ. ಯಾವ ಕಾರಣಕ್ಕೂ ಜೆಡಿಎಸ್​ಗೆ ಮುಸ್ಲಿಮರ ಮತಗಳು ಹೋಗುವುದಿಲ್ಲ. ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಪುತ್ರನ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಭ್ರಷ್ಟಾಚಾರ ವಿರೋಧಿಸಿ ಮಾ. 9ರಂದು ರಾಜ್ಯಾದ್ಯಂತ 2 ಗಂಟೆ ಬಂದ್​ಗೆ ಕರೆ ನೀಡಲಾಗಿದೆ. ಜಿಲ್ಲೆಯಲ್ಲೂ ಬಂದ್​ ಇರುತ್ತದೆ ಎಂದು ಕೆ.ಎಚ್​.ಮುನಿಯಪ್ಪ ಹೇಳಿದರು.


ವಿಧಾನ ಸಭೆಗೆ ಸ್ಪರ್ಧಿಸಲು ನನಗೆ ಆಸಕ್ತಿಯಿಲ್ಲ. ಆದರೆ ಹೈಕಮಾಂಡ್​ ಎಲ್ಲಿ ಸೂಚಿಸಿದರೂ ಸ್ಪರ್ಧೆಗೆ ಸಿದ್ಧ. ರಾಜ್ಯಾದ್ಯಂತ ಪ್ರಚಾರಕ್ಕೆ ಸೂಚಿಸಿದರೂ ತೆರಳುತ್ತೇನೆ.
ಕೆ.ಎಚ್​.ಮುನಿಯಪ್ಪ ಕೇಂದ್ರ ಮಾಜಿ ಸಚಿವ

ಗ್ರಾಮಾಂತರ ಬ್ಲಾಕ್​ ಅಧ್ಯಕ್ಷ ಉದಯಶಂಕರ್​, ನಗರ ಬ್ಲಾಕ್​ ಅಧ್ಯಕ್ಷ ಪ್ರಸಾದ್​ ಬಾಬು, ಸಂಯೋಜಕ ಎಲ್​.ಎ.ಮಂಜುನಾಥ್​, ಎಸ್ಸಿ ಘಟಕ ಅಧ್ಯಕ್ಷ ಜಯದೇವ್​, ಒಬಿಸಿ ಅಧ್ಯಕ್ಷ ಮಂಜುನಾಥ್​, ಮಹಿಳಾ ಘಟಕ ಅಧ್ಯಕ್ಷೆ ರತ್ನಮ್ಮ, ಮುಖಂಡ ಸೀತಿಹೊಸೂರು ಮುರಳಿಗೌಡ ಇತರರು ಇದ್ದರು.