ಪಾಂಡವಪುರ: ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರೈತಸಂಘ ತೊರೆಯುವುದಾಗಿ ಕೆಲವರು ನನ್ನ ವಿರುದ್ಧ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರೈತಸಂಘದ ನಿಕಟಪೂರ್ವ ಅಧ್ಯಕ್ಷ ಚಿಕ್ಕಾಡೆ ಹರೀಶ್ ಹೇಳಿದರು.
ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸುವುದೇ ಮುಖ್ಯ ಗುರಿ. ನನ್ನ ಕಾರ್ಯವೈಖರಿ ಮತ್ತು ನಡವಳಿಕೆ ಕೆಲವರಿಗೆ ಅಸಮಾಧಾನ ತಂದಿರಬಹುದು. ವೈಯಕ್ತಿಕ ಕಾರಣಗಳಿಗಿಂತ ಸಂಘಟನೆ ಮುಖ್ಯ ಎಂಬ ಉದ್ದೇಶದಿಂದ ಇನ್ನೂ ಒಂದು ವರ್ಷ ಅಧಿಕಾರಾವಧಿ ಇದ್ದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತಸಂಘ ಬಿಡುವ ಪ್ರಶ್ನೆಯೂ ಇಲ್ಲ. ಸಂಘಟನೆಗೆ ಒಡಕು ತರುವ ಕೆಲಸ ಮಾಡಲ್ಲ. ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ವಿಚಾರದಲ್ಲಿ ಅಭ್ಯಂತರವಿಲ್ಲ. ಆದರೆ ಆಯ್ಕೆ ವಿಚಾರದಲ್ಲಿ ತಾರತಮ್ಯ ನಡೆದಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿತ್ತು. ಅದನ್ನು ಬಿಟ್ಟು ಧರಣಿ ನಡೆಯುವ ಸ್ಥಳದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ನಾಯಕರಿಗಿಂತ ಕಾರ್ಯಕರ್ತರು ಮತ್ತು ಸಂಘಟನೆ ಮುಖ್ಯ. ದರ್ಶನ್ ಪುಟ್ಟಣ್ಣಯ್ಯ ಅವರು ವಿದೇಶದಿಂದ ಬಂದ ನಂತರ ಕೂಲಂಕಶವಾಗಿ ಚರ್ಚಿಸಿ ಕೈಗೊಳ್ಳಬೇಕಿದ್ದ ತೀರ್ಮಾನಗಳನ್ನು ಆತುರವಾಗಿ ಮಾಡಿದ್ದಾರೆ. ಈ ಎಲ್ಲ ವಿಚಾರಗಳು ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರಿಗೂ ಗೊತ್ತಿದೆ ಎಂದರು.
ರೈತಸಂಘ ಮುಖಂಡರಾದ ಬೀರಶೆಟ್ಟಹಳ್ಳಿ ಗಿರೀಶ್, ಡಿಂಕಾ ನಂಜೇಗೌಡ, ಡಾಮಡಹಳ್ಳಿ ಪ್ರಭುಸ್ವಾಮಿ, ಚಿಕ್ಕಾಡೆ ನಾಗರಾಜು, ಮಲ್ಲಿಗೆರೆ ರಾಜು, ಕೆರೆತೊಣ್ಣೂರು ಹರೀಶ್, ಗಾಣದಹೊಸೂರು ಪುನೀತ್, ಕಾತೀಕ್ ಸುದ್ದಿಗೋಷ್ಠಿಯಲ್ಲಿದ್ದರು.