ಮುದ್ದೇಬಿಹಾಳದ ಸಾರಿಗೆ ಘಟಕದಲ್ಲಿ ಬುಧವಾರ ಮುದ್ದೇಬಿಹಾಳ ಘಟಕದಿಂದ ಧರ್ಮಸ್ಥಳಕ್ಕೆ ತೆರಳುವ ಬಸ್‌ಗೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚಾಲನೆ ನೀಡಿದರು. ಘಟಕ ವ್ಯವಸ್ಥಾಪಕ ಎ.ಎಚ್. ಮದಭಾವಿ ಇದ್ದರು. 
ಜಿಲ್ಲೆ

ನನ್ನ ಮಂತ್ರಿ ಮಾಡಿ ಸಾರಿಗೆ ಸಂಸ್ಥೆಯಲ್ಲಿ ಲಾಭ ತೋರಸ್ತೀನಿ

ಮುದ್ದೇಬಿಹಾಳ: ಈ ಮುಂಚೆ ಬೆಂಗಳೂರಿಗೆ ಮುದ್ದೇಬಿಹಾಳದಿಂದ ಹವಾನಿಯಂತ್ರಿತ ಬಸ್‌ಗಳನ್ನು ಬಿಟ್ಟಾಗ ಜನರಿಂದ ಉತ್ತಮ ಸ್ಪಂದನೆ ದೊರೆಯಲಿಲ್ಲ. ನಷ್ಟದಲ್ಲಿ ಬಸ್ ಓಡಿಸುವ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಎಸಿ ಕೋಚ್ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ಘಟಕದಲ್ಲಿ ಬುಧವಾರ ಮುದ್ದೇಬಿಹಾಳ ಘಟಕದಿಂದ ಧರ್ಮಸ್ಥಳಕ್ಕೆ ತೆರಳುವ ನೂತನ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೂರದ ಊರುಗಳಿಗೆ ಬಸ್ ಆರಂಭಿಸುವ ಕುರಿತು ಘಟಕದ ಅಧಿಕಾರಿಗಳೊಂದಿಗೆ ಚರ್ಚಿಸಿ ಚಾಲನೆ ನೀಡಲಾಗುತ್ತದೆ. ಧರ್ಮಸ್ಥಳ ಬಸ್‌ಗೆ ಶಕ್ತಿ ಯೋಜನೆ ಅನ್ವಯವಾಗುತ್ತದೆ. ಆದರೆ ಹವಾನಿಯಂತ್ರಿತವಲ್ಲದ ಹೊಸ ಬಸ್‌ಗಳು ಬೆಂಗಳೂರು ಮಾರ್ಗದಲ್ಲಿ ಓಡಿಸಲು ಈ ತಿಂಗಳ ಅಂತ್ಯದಲ್ಲಿ ಬರಲಿವೆ ಎಂದರು.

ಎಸಿ ಬಸ್ ಸೇವೆ ಬಂದ್ ಆಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾಡಗೌಡರು, ಜನ ಖಾಸಗಿಯವರನ್ನು ಮೆಚ್ಚಿಕೊಂಡು ಬಸ್‌ನಲ್ಲಿ ಓಡಾಡ್ತಾರೆ. ಸಾರಿಗೆ ಬಸ್‌ಗಳಲ್ಲಿ ಜನ ಓಡಾಡಬೇಕಾದರೆ ಅದಕ್ಕೆ ಒಂದು ಟ್ರಿಕ್ ಇದೆ. ನನ್ನ ಮಂತ್ರಿ ಮಾಡಿದ್ರೆ ನಾನು ಕೆಎಸ್‌ಆರ್‌ಟಿಸಿ ಲಾಸ್ ಆಗದಂತೆ ನೋಡಿಕೊಳ್ತೇನೆ ಎಂದು ಶಾಸಕ ನಾಡಗೌಡರು ಹೇಳಿದರು.

ಘಟಕ ವ್ಯವಸ್ಥಾಪಕ ಎ.ಎಚ್. ಮದಭಾವಿ ಮಾತನಾಡಿ, ನೂತನ ಬಸ್ ಮುದ್ದೇಬಿಹಾಳ ತಾಲೂಕಿನ ನಾಲತವಾಡದಿಂದ ಸಂಜೆ 4ಕ್ಕೆ ಹೊರಟು ಮುದ್ದೇಬಿಹಾಳದಿಂದ ಸಂಜೆ 5ಕ್ಕೆ ಬಿಡುವುದು. ಧರ್ಮಸ್ಥಳದಿಂದ ಪ್ರತಿನಿತ್ಯ ಬೆಳಗ್ಗೆ 4.30ಕ್ಕೆ ಬಸ್ ಹೊರಡಲಿದೆ ಎಂದರು.

ಕೆಪಿಸಿಸಿ ಸದಸ್ಯ ಬಾಪುರಾವ ದೇಸಾಯಿ, ಅಸ್ಕಿ ಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ಸಿಕಂದರ್ ಜಾನ್ವೇಕರ, ವೈ.ಎಚ್. ವಿಜಯಕರ, ಯಮನಪ್ಪ ಚಲವಾದಿ ಹಾಗೂ ಸಾರಿಗೆ ಘಟಕದ ಅಧಿಕಾರಿಗಳು ಇದ್ದರು.