ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ದಾಖಲೆ ಪ್ರಮಾಣದ 52 ಕೋಟಿ ರೂ. ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಲಾಗಿದೆ ಎಂದು ಶಾಸಕ ಎನ್.ಮಹೇಶ್ ಮಾಹಿತಿ ನೀಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಅಭಿವೃದ್ಧಿಗೆ ಸರ್ಕಾರದ ಅನೇಕ ಯೋಜನೆಗಳಿದ್ದು, ಇದಕ್ಕೆ ಅನುದಾನವೂ ಹೆಚ್ಚಾಗಿ ಬರುತ್ತದೆ. ಆದರೆ ಲಿಂಗಾಯಿತ, ಉಪ್ಪಾರ, ಕುರುಬ ಸೇರಿದಂತೆ ಇತರೆ ಸಾಮಾನ್ಯ ವರ್ಗಗಳು ವಾಸ ಮಾಡುವ ಬಡಾವಣೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಮೊದಲು ಧ್ವನಿ ಎತ್ತಿದ್ದು ನಾನೆ. ಹಾಗಾಗಿ ನನಗೆ ಈ ಅನುದಾನ ಲಭಿಸಿದೆ. ಇದನ್ನು ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇತರೆ ಜನಾಂಗದವರು ವಾಸಿಸುವ ಬಡಾವಣೆಗಗಳ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನವನ್ನು ನೀಡಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ.
ತಾಲೂಕಿನ ಕಟ್ನವಾಡಿ, ಬಸವಾಪುರ, ಮಲ್ಲಿಗೆಹಳ್ಳಿ, ಕೃಷ್ಣಾಪುರ, ಕೊಮಾರನಪುರ, ಚಾಮಲಾಪುರ, ಗೌಡಹಳ್ಳಿ, ಬೂದಿತಿಟ್ಟು ಗ್ರಾಮಗಳಲ್ಲಿ 2.60 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದ್ದು, ಆದ್ಯತೆಗೆ ಅನುಗುಣವಾಗಿ ಇಲ್ಲಿನ ವಾಸಿಗಳು ಈ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಕೆಆರ್‌ಐಡಿಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಆರ್‌ಐಡಿಎಲ್‌ನ ಎಇಇ ಚಿಕ್ಕಲಿಂಗಯ್ಯ, ಜೆಇ ಚರಣ್, ಗ್ರಾ.ಪಂ. ಅಧ್ಯಕ್ಷರಾದ ಬಾಲುಪ್ರಸಾದ್, ಮಲ್ಲಿಕಾರ್ಜುನಸ್ವಾಮಿ, ಪ್ರವೀಣ್‌ಕುಮಾರ್, ಶಿವನಂಜಮ್ಮ, ಪಿಡಿಒಗಳಾದ ಲಲಿತಾ, ಮಮತಾ, ಸವಿತಾ ಗೌಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಆಪ್ತ ಸಹಾಯಕ ಮಹಾದೇವಸ್ವಾಮಿ, ರಾಮು, ಮಹೇಶ್, ಚಂದ್ರಶೇಖರ್, ಚಿಕ್ಕಣ್ಣ, ಬಿಳಿಗಿರಿ, ಬೂದಿತಿಟ್ಟು ನಾಗೇಂದ್ರ, ಚಾಮಲಪುರ ವಿಜಯ್, ಚಿನ್ನಸ್ವಾಮಿ ಸೇರಿದಂತೆ ಹಲವರು ಇದ್ದರು.