ಭವ್ಯ ಚರಿತ್ರೆಯನ್ನು ಮುಡಿಗೇರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯವು ಉದ್ದೇಶಿತ ‘ಶತಮಾನೋತ್ಸವ ವಸ್ತುಸಂಗ್ರಹಾಲಯ’ ನಿರ್ಮಾಣದಿಂದ ಹಿಂದೆ ಸರಿದಿದೆ. ಆರ್ಥಿಕ ಸಂಕಷ್ಟದಿಂದ ಇಡೀ ಯೋಜನೆಯನ್ನೇ ಕೈಬಿಟ್ಟಿದೆ..!
ವಿವಿ ಸ್ಥಾಪನೆಯಾದಗಿಂದ ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ಜಗತ್ತಿಗೆ ಪರಿಚಯಿಸಲು ಮ್ಯೂಸಿಯಂ ನಿರ್ಮಾಣಕ್ಕೆ ಮೈವಿವಿ ತೀರ್ಮಾನಿಸಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಇಡೀ ಪ್ರಸ್ತಾವನೆ ಕಡತದಲ್ಲೇ ಕಣ್ಮರೆಯಾಗಿದ್ದು, ಇದು ಕಣ್ತೆರೆಯುವ ಯಾವುದೇ ಲಕ್ಷಣಗಳೂ ಗೋಚರವಾಗುತ್ತಿಲ್ಲ.
ಹಿಂದಿನ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್‌ಕುಮಾರ್ ಈ ವಿಷಯವನ್ನು ಮೊದಲು ಪ್ರಕಟಿಸಿದ್ದರು. ‘ವಿವಿ ಕ್ಯಾಂಪಸ್ ಆದ ಮಾನಸಗಂಗೋತ್ರಿಯಲ್ಲಿ ಇದರ ನಿರ್ಮಾಣ ಕಾರ್ಯ ನಡೆಯಲಿದ್ದು, ಇನ್ನೂ ಮೂರ‌್ನಾಲ್ಕು ತಿಂಗಳಿನಲ್ಲಿ ಇದು ತಲೆಯೆತ್ತಲಿದೆ. ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು’ ಎಂದು ತಿಳಿಸಿದ್ದರು. ಆದರೆ, ಇದು ಮಾತಿನಲ್ಲೇ ಉಳಿದುಕೊಂಡಿದೆ. 2019ರಲ್ಲಿ ಇದರ ಕುರಿತು ಪ್ರಸ್ತಾವನೆ ಮಂಡಿಸಲಾಗಿತ್ತು. ಇಲ್ಲಿಗೆ 6 ವರ್ಷ ಕಳೆದರೂ ಶತಮಾನೋತ್ಸವ ವಸ್ತುಸಂಗ್ರಹಾಲಯ ಕನಸಾಗಿಲ್ಲ.
ಪ್ರೊ.ಹೇಮಂತ್‌ಕುಮಾರ್ ನಿವೃತ್ತಗೊಂಡು ಇದೀಗ ಪ್ರೊ.ಎನ್.ಕೆ.ಲೋಕನಾಥ್ ಕುಲಪತಿಯಾಗಿದ್ದಾರೆ. 2019ರ ಸೆಪ್ಟಂಬರ್ 16ರಂದು ನಡೆದ ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಕರೆದಿದ್ದ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಕಟಿಸುವಾಗ ಪ್ರೊ.ಲೋಕನಾಥ್ ಅವರು ಕಾಲೇಜು ಅಭಿವೃದ್ಧಿ ಮಂಡಳಿ(ಸಿಡಿಸಿ) ನಿರ್ದೇಶಕರಾಗಿ ಹಾಜರಿದ್ದರು. ಈ ಸಂಗತಿಯನ್ನು ಅವರು ಇದೀಗ ಮರೆತಂತೆ ಕಾಣುತ್ತಿದೆ.
ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ‘ಶತಮಾನೋತ್ಸವ ವಸ್ತುಸಂಗ್ರಹಾಲಯ’ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಹಿರಿಯ ವಿಶ್ವವಿದ್ಯಾಲಯಗಳಾಗಿರುವ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಇಂತಹ ಮ್ಯೂಸಿಯಂ ಇಲ್ಲ. ಹೀಗಾಗಿ, ಮೈಸೂರು ವಿವಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿತ್ತು. ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ಈ ರೀತಿಯ ವಸ್ತುಸಂಗ್ರಹಾಲಯವಿದೆ. ಅದರ ಸಲಹೆಯನ್ನು ಸಹ ಪಡೆದುಕೊಳ್ಳಲಾಗಿತ್ತು. ಈ ಸಂಬಂಧ ಸಲಹೆ ಪಡೆದುಕೊಳ್ಳಲು ಸಮಿತಿಯನ್ನೂ ರಚಿಸಲಾಗಿತ್ತು. ಬಳಿಕ ಯಾವುದೇ ಪ್ರಕ್ರಿಯೆಗಳು ನಡೆಯಲಿಲ್ಲ.
ಮೈಸೂರು ವಿಶ್ವವಿದ್ಯಾಲಯವು 1916ರ ಜುಲೈ 27ರಂದು ಸ್ಥಾಪನೆಯಾಯಿತು. ಇದು ದೇಶದ 6ನೇ ಮತ್ತು ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾಲಯ. ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾಲಯವೂ ಹೌದು.
ಉದಾರವಾದಿ ಹಾಗೂ ದೂರದೃಷ್ಟಿಯುಳ್ಳ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಹಾಗೂ ಅಂದಿನ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯ(1860-1962) ಪ್ರಯತ್ನದ ಫಲ ಈ ವಿಶ್ವವಿದ್ಯಾಲಯ. ಇದು ಈಗ ಹೆಮ್ಮರವಾಗಿ ಬೆಳೆದಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ, ಸಂಶೋಧನಾರಂಗದಲ್ಲೂ ಅನೇಕ ಸಾಧನೆ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕಾರಣವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯವಷ್ಟೇ ಅಲ್ಲ, ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಮೈವಿವಿಯ ಕೀರ್ತಿಯನ್ನು ಜಗತ್ತಿನೆಲ್ಲಡೆ ಪಸರಿಸಿದ್ದಾರೆ.
ಇಲ್ಲಿಯ ಶ್ರೇಷ್ಠ ಪ್ರಾಧ್ಯಾಪಕರು ಉನ್ನತ ಶಿಕ್ಷಣ, ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆ, ಸರ್ಕಾರಿ-ಖಾಸಗಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಟ್ಟಲು ನೆರವಾಗಿದ್ದಾರೆ. ಹತ್ತಾರು ವಿದ್ಯಾಸಂಸ್ಥೆಗಳನ್ನು ಮುನ್ನೆಡೆಸಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದಾರೆ. ಹೀಗೆ ಅನೇಕ ಮಹತ್ವದ ಘಟನೆಗಳಿಗೆ ಮೈಸೂರು ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. ಇಂತಹ ಚರಿತ್ರೆಯನ್ನು ಈಗಿನ ಯುವ ಪೀಳಿಗೆಗೆ ಮತ್ತು ಸಾರ್ವಜನಿಕರಿಗೆ ತಿಳಿಸಿಕೊಡುವ ಕೆಲಸ ಆಗಿಲ್ಲ ಎಂಬ ಕೊರಗು ಬಹಳಷ್ಟು ವಿದ್ಯಾರ್ಥಿಗಳು, ಬೋಧಕರಲ್ಲಿ ಇದೆ.
ರಾಜ್ಯದಲ್ಲಿ ಶತಮಾನೋತ್ಸವ ಕಂಡಿರುವ ಮೊದಲ ವಿವಿ ಎಂಬ ಹಿರಿಮೆಯನ್ನು ಮೈಸೂರು ವಿಶ್ವವಿದ್ಯಾಲಯ ಹೊಂದಿದೆ. ರಾಜ್ಯದಲ್ಲಿ 41 ಸರ್ಕಾರಿ ವಿಶ್ವವಿದ್ಯಾಲಯ, 28 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವುದೊಂದೂ ಶತಾಬ್ದಿಯ ಹೊಸ್ತಿಲಿಗೆ ಬಂದಿಲ್ಲ. ಆದರೆ, ಮೈವಿವಿ ಶತಮಾನೋತ್ಸವ ಕಂಡು ಮುನ್ನೆಡೆಯುತ್ತಿದೆ.
ಇದು 2015-16ರಲ್ಲಿ ನೂರನೇ ವರ್ಷದ ಉತ್ಸವವನ್ನು ಆಚರಿಸಿಕೊಂಡಿತು. 2015ರ ಜುಲೈ 27ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ವರ್ಷವಿಡೀ ನಡೆದ ಶತಮಾನೋತ್ಸವ ಆಚರಣೆಯ ಅಂಗವಾಗಿ 8 ನೊಬೆಲ್ ಪ್ರಶಸ್ತಿ ವಿಜೇತರು ಉಪನ್ಯಾಸ ನೀಡಿದ್ದರು. ಶ್ರೇಷ್ಠ ವಿದ್ವಾಂಸರನ್ನು ಆಹ್ವಾನಿಸುವ ಮುಖಾಂತರ ವಿಚಾರಗೋಷ್ಠಿ, ಕಾರ್ಯಾಗಾರಗಳು ನಡೆದವು. 2016ರ ಜುಲೈ 22ರಂದು ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸಮಾರೋಪ ಸಮಾರಂಭದ ಭಾಷಣ ಮಾಡಿದ್ದರು. ಈ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವಾಗಿಲ್ಲ.
ಭಾರತೀಯ ವಿಜ್ಞಾನ ಕಾಂಗ್ರೆಸ್ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾಲಯವು 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು 2016ರ ಜನವರಿ 3ರಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಇದು ಉದ್ಘಾಟನೆಗೊಂಡಿತು.
ಯುಎಸ್‌ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಜಪಾನ್, ಕೊರಿಯಾ, ಫ್ರಾನ್ಸ್ ಇತ್ಯಾದಿ ದೇಶಗಳಿಂದ 600 ಉನ್ನತ ಶ್ರೇಣಿಯ ವ್ಯಕ್ತಿಗಳು ಭಾಗವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ನೊಬೆಲ್ ಪ್ರಶಸ್ತಿ ವಿಜೇತರು, ಒಬ್ಬರು ಭಾರತ ರತ್ನಪುರಸ್ಕೃತರು, ಶ್ರೇಷ್ಠ ವಿಜ್ಞಾನಿಗಳು ಉಪನ್ಯಾಸ ನೀಡಿದ್ದರು. ಇಂತಹ ಸಾಧನೆ ರಾಜ್ಯದಲ್ಲಿರುವ ಬೇರೆ ವಿವಿಯಿಂದ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಆದರೆ, ಮೈವಿವಿ ಪಾಲಿಗೆ ಇದೆಲ್ಲ ಇತಿಹಾಸ. ಇಷ್ಟೆಲ್ಲ ಸಾಧನೆ ಮಾಡಿ ಯಶಸ್ಸನ್ನು ಮುಡಿಗೇರಿಸಿಕೊಂಡಿದೆ. ಇದನ್ನೆಲ್ಲವನ್ನು ಪರಿಚಯಿಸುವ ಕೆಲಸದಲ್ಲಿ ಮಾತ್ರ ಮೈವಿವಿ ಹಿಂದೆ ಬಿದ್ದಿದೆ.
ಮೈವಿವಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ರಾಜ್ಯ ಸರ್ಕಾರದಿಂದ ಬರುವ ಅನುದಾನ ತಗ್ಗಿದೆ. ವಿಭಜನೆಗೊಂಡ ಹೊಸ ವಿವಿಗಳು ರಚನೆಯಿಂದ ಆದಾಯ ಕಡಿಮೆಯಾಗಿದೆ. ಹೀಗಾಗಿ, ಪಿಂಚಣಿದಾರರಿಗೆ ಕೊಡಲು ದುಡ್ಡಿಲ್ಲ. ನೌಕರರು, ಸಿಬ್ಬಂದಿಗೆ ವೇತನ ನೀಡಲು ಪರದಾಡುತ್ತಿದೆ. ಅತಿಥಿ ಉಪನ್ಯಾಸಕರ ವೇತನದ ಹೊರೆ ಹೆಚ್ಚಾಗಿದೆ. ಹೀಗಾಗಿ, ಶತಮಾನೋತ್ಸವ ಮ್ಯೂಸಿಯಂ ನಿರ್ಮಾಣದಿಂದ ಹಿಂದೆ ಸರಿದಿದೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಶತಮಾನೋತ್ಸವ ವಸ್ತುಸಂಗ್ರಹಾಲಯ ನಿರ್ಮಾಣ ಬಹಳ ದುಬಾರಿಯಾಗಿದ್ದು, ಅದಕ್ಕೆ ಹಣಕಾಸಿನ ನೆರವು ಬೇಕು. ಸದ್ಯಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ, ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು. ಪ್ರೊ.ಎನ್.ಕೆ.ಲೋಕನಾಥ್ ಕುಲಪತಿ, ಮೈಸೂರು ವಿಶ್ವವಿದ್ಯಾಲಯ