ಆಲೂರು: ಸಮಾಜದಲ್ಲಿನ ಅನಿಷ್ಟತೆಗಳನ್ನು ಹೋಗಲಾಡಿಸಿ ಮಾನವೀಯ ಸಮಾಜದ ನಿರ್ಮಾಣ ಕನಸು ಕಂಡವರು ಬಸವಣ್ಣನವರು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣನವರು ಸಮಾಜದಲ್ಲಿನ ಸ್ಥಿತಿಗತಿ, ಅಸಮಾನತೆ, ಜಾತಿಯತೆ ಅಸ್ಪಶ್ಯತೆ ಕಂಡು ಎಲ್ಲ ಜಾತಿ ಧರ್ಮವನ್ನು ತೊಡೆದು ಹಾಕಿ ಮನುಷ್ಯ ಜಾತಿಯೇ ಮೇಲು ಎಂದರು. ಆದರೆ, ಇಂದಿಗೂ ಅವರ ಕನಸು ನನಸಾಗಲಿಲ್ಲ. ಬಸವಣ್ಣನವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಹೊಸ ಬದಲಾವಣೆ ತರಬೇಕು ಎಂದರು.
ಮುರುಡೂರು ಸೋಮಶೇಖರ ಮಾತನಾಡಿ, ಬಸವಣ್ಣನವರ ದೃಷ್ಟಿಯಲ್ಲಿ ಜಾತಿಗೆ ಸ್ಥಾನವೇ ಇಲ್ಲ. ಅವರು ಕಂಡದ್ದು ಜಾತ್ಯತೀತ ಸಮಾಜ. ಕೆಳಸ್ತರದ ಶೋಷಿತರ ಬದುಕಿನಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಶಕ್ತಿಯನ್ನು ತುಂಬಿದರು. ಅಂತರ್ಜಾತಿ ವಿವಾಹ ಏರ್ಪಡಿಸಿ ಪಟ್ಟಭದ್ರ ಹಿತಾಸಕ್ತಿಗಳ ವಿರೋಧವನ್ನೂ ಎದುರಿಸಿದರೂ ತಮ್ಮ ಸಮಾಜ ಸುಧಾರಣೆ ಕಾರ್ಯ ನಿಲ್ಲಿಸಲಿಲ್ಲ. ಹೆಣ್ಣಿನ ಬಗ್ಗೆ ಇದ್ದ ಅಸಮಾನತೆ ತೊಡೆದು ಹಾಕುವಲ್ಲಿ ಬಸವಣ್ಣನವರು ವಹಿಸಿದ ಪಾತ್ರ ವಿಶಿಷ್ಟ. ಸ್ತ್ರೀ ಸಮಾನತೆ ಪ್ರತಿಪಾದಿಸಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್ ಕುಮಾರ್, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಖಜಾಂಚಿ ರಾಜು, ಸಹ ಕಾರ್ಯದರ್ಶಿ ಡಾ.ಜಯರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಆಯೋಗದ ಕಾರ್ಯಾಧ್ಯಕ್ಷ ಶಂಕರಾಚಾರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಕಣಗಾಲ್, ಕರವೇ ತಾಲೂಕು ಅಧ್ಯಕ್ಷ ನಟರಾಜ್, ಹುಣಸವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾವನೂರು ಮೋಹನ್, ನಾಗರಿಕ ವೇದಿಕೆ ಅಧ್ಯಕ್ಷ ಮಂಜೇಗೌಡ ಹಾಜರಿದ್ದರು.