ಜಿಲ್ಲೆ

ನನಗೆ ಟಿಕೆಟ್ ತಪ್ಪಿದ್ದಕ್ಕೆ ಸಿದ್ದರಾಮಯ್ಯ ಕಾರಣ: ಮಾಜಿ ಶಾಸಕ ವಾಸು ಆರೋಪ

ಮೈಸೂರು: ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇನ್ನಷ್ಟು ಹೆಚ್ಚಾಗಿದ್ದು, ‘ಕಳೆದ ಬಾರಿ ನನ್ನ ಸೋಲಿಗೆ ಕಾರಣರಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಲೇ ಈಗ ಟಿಕೆಟ್ ತಪ್ಪಿದೆ’ ಎಂದು ಚಾಮರಾಜ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ವಾಸು ನೇರ ಆರೋಪ ಮಾಡಿದ್ದಾರೆ.
ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ನನ್ನ ಪರವಾಗಿ ಬೆಂಬಲ ಇತ್ತು. ಕೇಂದ್ರ ಆಯ್ಕೆ ಸಮಿತಿಯಲ್ಲಿಯೂ ನನ್ನ ಹೆಸರು ಅಂತಿಮಗೊಳಿಸಲಾಗಿತ್ತು. ಸಿಇಸಿಯಲ್ಲಿದ್ದ ವೀರಪ್ಪ ಮೊಯ್ಲಿ ಅವರು ಸೇರಿದಂತೆ ಅನೇಕರು ಶಿಫಾರಸು ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರ ವೈಯಕ್ತಿಕ ಹಠದಿಂದ ಟಿಕೆಟ್ ತಪ್ಪಿದೆ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನಲ್ಲಿ ಎಲ್ಲ ಬಗೆಯ ಆಸ್ಪತ್ರೆ, ಕಾಲೇಜುಗಳು ಇರಬೇಕೆಂದು ಬಯಸಿದ್ದೆ. ನನ್ನ ಕ್ಷೇತ್ರದಲ್ಲಿ ಹೃದ್ರೋಗ ಕೇಂದ್ರ, ಜಿಲ್ಲಾಸ್ಪತ್ರೆ, ಪಂಚಕರ್ಮ, ಟ್ರಾಮಾ ಸೆಂಟರ್, ಇಎಸ್‌ಐ ಸೇರಿದಂತೆ ಅನೇಕ ಆಸ್ಪತ್ರೆಗಳನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ನಿರ್ಮಿಸಲಾಯಿತು. ಮುಂದೆ ನಿಮ್ಹಾನ್ಸ್, ಕಿದ್ವಾಯಿ, ಏಮ್ಸ್ ಮಾದರಿ ಆಸ್ಪತ್ರೆಗಳನ್ನು ನಿರ್ಮಿಸಬೇಕು ಎನ್ನುವುದು ನನ್ನ ಹಂಬಲವಾಗಿತ್ತು ಎಂದರು.
ಕಳೆದ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಸಿದ್ದರಾಮಯ್ಯ ಅವರ ಬಣಕ್ಕೆ ಸೇರಿದ ಅವರ ಆಪ್ತರು ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಹಿತ ದೂರು ನೀಡಿದೆ. ಸಿದ್ದರಾಮಯ್ಯ ಅವರ ಗಮನಕ್ಕೂ ತಂದೆ. ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಯಾವುದೇ ವಿಷಯವನ್ನು ನೇರವಾಗಿ ಹೇಳುತ್ತಿದ್ದೆ. ಕಳೆದ ಚುನಾವಣೆಯಲ್ಲಿ ಒಂದೇ ಜಾತಿಯ ನಾಲ್ವರಿಗೆ ಟಿಕೆಟ್ ನೀಡಲಾಗಿತ್ತು. ಅಲ್ಲದೆ, ಸಂಸದ ಸ್ಥಾನಕ್ಕೂ ತಮ್ಮದೇ ಜಾತಿಯವರನ್ನು ಕಣಕ್ಕೆ ಇಳಿಸಿದ್ದರು. ಇದರಿಂದ ಸಹಜವಾಗಿ ಇತರ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟವಾಯಿತು. ಇದನ್ನು ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿದ್ದೆ. ಅದೇ ನನ್ನ ದೊಡ್ಡ ತಪ್ಪಾಗಿ ಕಂಡು ಟಿಕೆಟ್ ಕೊಡಿಸಲು ಅಡ್ಡಗಾಲು ಹಾಕಿದರು. ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತಿದ ಅನೇಕರು ಬಲಿಯಾಗಿದ್ದಾರೆ ಎಂದು ದೂರಿದರು.
ಟಿಕೆಟ್ ತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ. ಸೋತಾಗಲೂ ನಾನು ಕುಗ್ಗಿಲ್ಲ. ಆದರೆ ನನಗಿದ್ದ ದೂರದೃಷ್ಟಿತ್ವ ಈಡೇರಿಸಲು ಸಾಧ್ಯವಾಗಲಿಲ್ಲ ಎನ್ನುವ ಬೇಸರವಿದೆ. ನನ್ನ 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇರುವುದನ್ನು ತೋರಿಸಿದರೆ ನಾನು ನಿವೃತ್ತಿ ಹೊಂದಲು, ದಂಡ ಕಟ್ಟಲೂ ಸಿದ್ಧ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿಯಾಗಲಿ ಸಾರ್ವಜನಿಕ, ಸರ್ಕಾರದ ಆಸ್ತಿಯನ್ನು ಅನಧಿಕೃತ ತೆಗೆದುಕೊಂಡಿದ್ದರೆ ಸರ್ಕಾರಕ್ಕೆ ಬರೆದುಕೊಡ್ತೀನಿ ಎಂದು ಸವಾಲು ಹಾಕಿದರು.
ಯಾವುದೇ ಸಮಸ್ಯೆ ಇಲ್ಲದೆ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಆದರೂ 2014ರ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಬಿಟ್ಟು ಎಲ್ಲ ಕ್ಷೇತ್ರದಲ್ಲಿಯೂ ಹೀನಾಯವಾಗಿ ಕಾಂಗ್ರೆಸ್ ಸೋತಿತ್ತು. ಆದರೆ ಸಂಸದೀಯ ನಾಯಕರಾಗಿ ಸಿದ್ದರಾಮಯ್ಯ ಅದರ ಹೊಣೆ ಹೊರಲಿಲ್ಲ. 2018ರ ಚುನಾವಣೆಯ ಸೋಲಿನ ಜವಾಬ್ದಾರಿಯನ್ನೂ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೆರಡು ದಿನದಲ್ಲಿ ನಿರ್ಧಾರ
ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದ್ದು, ಎಲ್ಲ ನಾಯಕರಿಗೂ ಕೃತಜ್ಞನಾಗಿದ್ದೇನೆ. ನಾನು ಕಾಂಗ್ರೆಸ್ ಬಿಡುವುದಿಲ್ಲ. ಆದರೆ ಪಕ್ಷದಲ್ಲಿ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವರನ್ನು ಖಂಡಿಸುವುದು ನಿಜ. ಟಿಕೆಟ್ ತಪ್ಪಿಸುವುದರಿಂದ ನನ್ನ ಧ್ವನಿ ತಗ್ಗಿಸಲು ಸಾಧ್ಯವಿಲ್ಲ ಎಂದು ವಾಸು ಹೇಳಿದರು.
ಪಕ್ಷದಲ್ಲೇ ಇದ್ದು ಏನು ಮಾಡಬೇಕು ಎನ್ನುವುದನ್ನು ಇನ್ನೆರಡು ದಿನಗಳಲ್ಲಿ ನಿರ್ಧರಿಸುತ್ತೇನೆ. ಬೇರೆ ಪಕ್ಷದವರಿಂದಲೂ ತಮ್ಮ ಪಕ್ಷ ಸೇರುವಂತೆ ನನಗೆ ಒತ್ತಡ ಇರುವುದು ನಿಜ. ಆದರೆ ಕಾಂಗ್ರೆಸ್ ಬಿಡುವುದರಿಂದ ನನ್ನ ಬೆಂಬಲಿಗರಿಗೆ ಅನ್ಯಾಯ ಆಗುತ್ತದೆ. ಆದ್ದರಿಂದ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲೇ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವರನ್ನು ಖಂಡಿಸೋದು ನಿಜ ಎಂದು ತಿಳಿಸಿದರು.