ಜಿಲ್ಲೆ

ನದಿಯಲ್ಲಿ ಮುಳುಗಿ ಕಾರ್ಮಿಕ ಸಾವು

ನಾಪೋಕ್ಲು: ಸಮೀಪದ ಕೊಟ್ಟಮುಡಿ ಕಾವೇರಿ ನದಿಯಲ್ಲಿ ಬುಧವಾರ ಸ್ನಾನಕ್ಕೆ ತೆರಳಿದ್ದ ಕಾರ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.


ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ಅಪ್ಪು (34) ಮೃತರು. ಕಟ್ಟಡ ಕಾರ್ಮಿಕರಾಗಿದ್ದ ಅಪ್ಪು ಜತೆ ಸುನಿಲ್ (34), ಬಿಜು (48) ಮತ್ತು ಮೋಹನ್ (51) ಬುಧವಾರ ಮಧ್ಯಾಹ್ನ ಕೊಟ್ಟಮುಡಿಯ ಕಾವೇರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಅಪ್ಪು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಸ್ಥಳೀಯರಾದ ರಜಾಕ್, ಮೂಸ, ಕರೀಂ ಮತ್ತು ಹನೀಫ್ ಸೇರಿದಂತೆ ಸಾರ್ವಜನಿಕರ ನೆರವಿನಿಂದ ಮೃತನ ಶವವನ್ನು ನೀರಿನಿಂದ ಹೊರ ತೆಗೆಯಲಾಯಿತು. ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರು. ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದ್ದು, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.